Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

12 December 2012

ದಶಂಬರ ಬಂತೆಂದರೆ ಶಾಲಾ ವಿದ್ಯಾರ್ಥಿಗಳಿಗೆ ಎರಡು ಅಬ್ಬರಗಳು. ಮೊದಲನೆಯದು ಕಲೋತ್ಸವ. ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗುವ ಕಲೋತ್ಸವ ಸ್ಪರ್ಧೆಗಳು ಕುಂಬಳೆ ಉಪಜಿಲ್ಲಾ ಮಟ್ಟದಲ್ಲಿ ಈ ತಿಂಗಳ ಆರಂಭದಲ್ಲಿ ನಡೆದವು. ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಸ್ಪರ್ಧೆಗಳಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳೂ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಸಂಸ್ಕೃತೋತ್ಸವದ ಪ್ರೌಢಶಾಲಾ ಮತ್ತು ಯುಪಿ ವಿಭಾಗದ ಸ್ಪರ್ಧೆಗಳಲ್ಲಿ ಅತ್ಯಧಿಕ ಅಂಕ ಪಡೆದು ಸಂಸ್ಕೃತೋತ್ಸವದ ಸಮಗ್ರ ಪ್ರಶಸ್ತಿಯನ್ನು ಶಾಲೆಗೆ ತಂದಿದ್ದಾರೆ. ಅವರಿಗೆ ಶುಭಾಶಯಗಳು.

ನಾಳೆಯಿಂದ ಮಧ್ಯಾವಧಿ ಪರೀಕ್ಷೆಗಳು ಆರಂಭ. ಎಲ್ಲ ವಿದ್ಯಾರ್ಥಿಗಳೂ ಪರೀಕ್ಷೆಯ ತಯಾರಿಯಲ್ಲಿದ್ದಾರೆ. ಅವರಿಗೂ ಶುಭಾಶಯಗಳು.

21 November 2012

ಜಿಲ್ಲಾ ವಿಜ್ಞಾನ ಮೇಳದಲ್ಲಿ ಪ್ರಶಸ್ತಿ



 20.11.2012 ರಂದು ಚಟ್ಟಂಚಾಲ್‌ನಲ್ಲಿ ಜರಗಿದ ಕಾಸರಗೋಡು ಜಿಲ್ಲಾ ಮಟ್ಟದ ವಿಜ್ಞಾನ ಮೇಳದ ಪ್ರೌಢಶಾಲಾ ವಿಭಾಗದ ‘ಸ್ಥಿರ ಮಾದರಿ’ ಪ್ರದರ್ಶನದಲ್ಲಿ ದ್ವಿತೀಯ ಸ್ಥಾನ ಗಳಿಸಿ ಕಲ್ಲಿಕೋಟೆಯಲ್ಲಿ ಜರಗಲಿರುವ ರಾಜ್ಯ ಮಟ್ಟದಲ್ಲಿ ಭಾಗವಹಿಸಲು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಗಳಾದ ಸ್ವಾಗತ ರೈ. ಬಿ ಮತ್ತು ಅಭಿಲಾಶ್ ಶರ್ಮ. ಕೆ ಅರ್ಹತೆ ಪಡೆದಿದ್ದಾರೆ. ಸ್ವಾಗತ ರೈ - ಶಿಕ್ಷಕ ದಂಪತಿಯರಾದ ಚಂದ್ರಶೇಖರ ರೈ. ಕೆ ಮತ್ತು ಚಂದ್ರಾವತಿ. ಬಿ ಇವರ ಸುಪುತ್ರಿ. ಅಭಿಲಾಶ್ ಶರ್ಮ.ಕೆ - ಹಿರಿಯ ಪತ್ರಕರ್ತ ಶಂಕರನಾರಾಯಣ ಕಿದೂರು ಮತ್ತು ಕೃಷ್ಣವೇಣಿ ಕಿದೂರು ಇವರ ಪುತ್ರ.

17 November 2012

ಮಾದಕ ದ್ರವ್ಯ ವಿರುದ್ಧ ಜಾಗೃತಿ

ಇಂದು ಅರಾಹ್ನ ನಮ್ಮ ಶಾಲೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳಾದ ಸತೀಶ್ ಬಲ್ಲಾಳ್ ಮತ್ತು ಮದನನ್‌ ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯ ಉಪಯೋಗದ ವಿರುದ್ಧ ಜಾಗೃತಿ ತರಗತಿಯನ್ನು ನಡೆಸಿದರು. ಶಾಲಾ ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಎಂ.ಸೂರ್ಯನಾರಾಯಣ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ಶಿಕ್ಷಕ ಕೆ. ಶಂಕರನಾರಾಯಣ ಶರ್ಮ ಧನ್ಯವಾದ ಸಮರ್ಪಿಸಿದರು. ಹಿರಿಯ ಶಿಕ್ಷಕಿ ಭುವನೇಶ್ವರಿ. ಎ ಕಾರ್ಯಕ್ರಮ ನಿರೂಪಿಸಿದರು.

ಗ್ಲಾಸ್ ಪೈಂಟಿಂಗ್ ಮತ್ತು ಭಾವಗೀತೆ ಗಾಯನ ತರಬೇತಿ

ಮೊನ್ನೆ 13.11.2012 ದೀಪಾವಳ ಹಬ್ಬದ ರಜೆಯ ದಿನ, ನಮ್ಮ ಶಾಲಾ ಆಕ್ತ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಎರಡು ವಿಭಿನ್ನ ಕಾರ್ಯಕ್ರಮಗಳನ್ನು ಶಾಲಾ ಆರ್ಟ್ಸ್ ಕ್ಲಬ್ ಆಯೋಜಿಸಿತು. ಉಪ್ಪಳ ಸರಕಾರಿ ಶಾಲಾ ಶಿಕ್ಷಕಿ ಶ್ರೀಮತಿ ಜ್ಯೋತಿ ಕುಮಾರಿ. ಪಿ.ವಿ ವಿದ್ಯಾರ್ಥಿಗಳಿಗೆ ಭಾವಗೀತ ಗಾಯನ ತರಬೆತಿ ನೀಡಿದರು. ಶಾಲಾ ಸಂಚಾಲಕ ಶ್ರೀ ಜಯದೇವ ಖಂಡಿಗೆ ಇವರ ಪುತ್ರಿ ಕುಮಾರಿ ಸಂಜೋತಾ ವಿದ್ಯಾರ್ಥಿಗಳಿಗೆ ಗ್ಲಾಸ್ ಪೈಂಟಿಂಗ್ ಮಾಡುವ ವಿಧಾನದ ತರಬೇತಿ ನೀಡಿದರು. ಧನ್ಯವಾದಗಳು ಅವರಿಗೆ...

24 October 2012

ಶಾರದಾ ಪೂಜಾ - 2012

ಇಂದು ನಮ್ಮ ಶಾಲೆಯ ಶಾರದಾ ಪೂಜೆ. ವರ್ಷಂಪ್ರತಿ ನಡೆಸುವಂತೆ ವಿದ್ಯಾರ್ಥಿಗಳು ‘ಅಷ್ಟಾವಧಾನ ಸೇವೆ’ ನೆರವೇರಿಸಿ, ಶಾರದಾಂಬೆಯ ಪೂಜೆಯಲ್ಲಿ ಪಾಲ್ಗೊಂಡರು. ನಿಮಗೆಲ್ಲರಿಗೂ ವಿಜಯ ದಶಮಿಯ ಶುಭಾಶಯಗಳು.

19 October 2012

ಕಾಸರಗೋಡಿನಲ್ಲಿ ಕನ್ನಡ ಉಳಿದಿದೆ: ಪ್ರಕಾಶ್ ಮತ್ತಿಹಳ್ಳಿ


“ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿಯೇ ಕನ್ನಡ ದೂರವಾಗುತ್ತಿದೆ. ಬೆಂಗಳೂರಿನ ಜನಸಂಖ್ಯೆಯ ಕೇವಲ ೨೩ ಶೇಕಡಾ ಜನ ಮಾತ್ರ ಸದ್ಯ ಕನ್ನಡಿಗರಿದ್ದಾರೆ. ಆದರೆ ಕರ್ನಾಟಕದಲ್ಲಿರುವ ಕನ್ನಡಿಗರಿಗಿಂತಲೂ ಸುಲಲಿತವಾಗಿ ಕನ್ನಡ ಮಾತನಾಡುವ ಜನ ಈ ಗಡಿನಾಡಿನಲ್ಲಿದ್ದಾರೆ ಎಂಬುದನ್ನು ತಿಳಿದು ಸಂತಸವಾಗಿದೆ. ಕನ್ನಡದ ಬೆಳವಣಿಗೆಗಾಗಿ ಈ ನಾಡಿನ ಜನತೆಯ ಜೊತೆ ನಾವೂ ಕೈಜೋಡಿಸುತ್ತೇವೆ. ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿ ಪ್ರಕಾಶ್ ಮತ್ತಿಹಳ್ಳಿ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಪ್ರಾಯೋಜಿಸುವ ಧನ ಸಹಾಯದಿಂದ ನಿರ್ಮಿಸಲಾದ ಗ್ರಂಥಾಲಯ ಕಟ್ಟಡದ ಕಾಮಗಾರಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ.ಎಂ. ಸುಬ್ರಾಯ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕಾರ್ಯದರ್ಶಿ ಎಂ.ವಿ. ಮಹಾಲಿಂಗೇಶ್ವರ ಭಟ್, ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಪಡಿಯಡ್ಪು ಶಂಕರ ಭಟ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ನಟರಾಜ ರಾವ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಸ್ವಾಗತಿಸಿದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಧನ್ಯವಾದ ಸಮರ್ಪಿಸಿದರು. ಚಿತ್ರಕಲಾ ಶಿಕ್ಷಕ ಗೋವಿಂದ ಶರ್ಮ ಕಾರ್ಯಕ್ರಮ ನಿರೂಪಿಸಿದರು.

17 October 2012

19ರಂದು ಗ್ರಂಥಾಲಯ ಕಟ್ಟಡ - ಕಾಮಗಾರಿ ಪರಿಶೀಲನಾ ಸಭೆ

ನಮ್ಮ ಪ್ರೌಢಶಾಲೆಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕೊಡಮಾಡುವ ಧನ ಸಹಾಯದಿಂದ ನಿರ್ಮಿಸಲಾದ ಗ್ರಂಥಾಲಯ ಕಟ್ಟಡದ ಕಾಮಗಾರಿ ಪರಿಶೀಲನಾ ಸಭೆಯು ೧೯.೧೦.೨೦೧೨ ಶುಕ್ರವಾರ ಮಧ್ಯಾಹ್ನ ೧೨ ಗಂಟೆಗೆ ಜರಗಲಿದೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಎಚ್.ವಿ.ರಾಮಚಂದ್ರ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸುವರು.

ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ.ಎಂ. ಸುಬ್ರಾಯ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿ ಪ್ರಕಾಶ್ ಮತ್ತಿಹಳ್ಳಿಯವರು  ಪರಿಶೀಲನಾ ವರದಿಯನ್ನು ಮಂಡಿಸುವರು.  ಶಾಲಾ ಹಳೆ ವಿದ್ಯಾರ್ಥಿ ಕುಂಜಾರು ಸುಬ್ರಾಯ ಮತ್ತು ನಿವೃತ್ತ ಮುಖ್ಯೋಪಾಧ್ಯಾಯ ಪಡಿಯಡ್ಪು ಶಂಕರ ಭಟ್ ಶುಭ ಹಾರೈಸಲಿದ್ದಾರೆ.

12 October 2012

ರಕ್ತ ಗುಂಪು ನಿರ್ಣಯ ಶಿಬಿರ

ಇಂದು ನಮ್ಮ ಶಾಲೆಯಲ್ಲಿ ರಕ್ತ ಗುಂಪು ನಿರ್ಣಯ ಶಿಬಿರ ಜರಗಿತು. ನೀರ್ಚಾಲಿನಲ್ಲಿ ಹೊಸದಾಗಿ ಆರಂಭವಾದ ‘ಅಭಯ’ ಡಯಗ್ನೋಸ್ಟಿಕ್ ಲ್ಯಾಬ್‌ನ ತಜ್ಞೆ ಸುಲೋಚನಾ ಇಂದು ನಮ್ಮ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳ ರಕ್ತ ಗುಂಪು ನಿರ್ಣಯ ನಡೆಸಿಕೊಟ್ಟರು. ಕೃತಜ್ಞತೆಗಳು...

27 September 2012

ಶಾಲಾ ಮಟ್ಟದ ವೃತ್ತಿ ಪರಿಚಯ ಮೇಳ

ನಿನ್ನೆ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಒಂದು ಹೊಸ ಅನುಭವ. ಪ್ರತೀ ವರ್ಷವೂ ಉಪಜಿಲ್ಲಾ ಮಟ್ಟದಲ್ಲಿ ನಡೆಯುವ ವೃತ್ತಿ ಪರಿಚಯ ಮೇಳಕ್ಕೆ ಪೂರ್ವಭಾವಿಯಾಗಿ ನಮ್ಮ ಶಾಲಾ ಮಟ್ಟದಲ್ಲಿ ಪ್ರಪ್ರಥಮ ಬಾರಿಗೆ ನಿನ್ನೆ ವೃತ್ತಿಪರಿಚಯ ಮೇಳವನ್ನು ಆಯೋಜಿಸಲಾಯಿತು. ಶಾಲಾ ಚಿತ್ರಕಲಾ ಶಿಕ್ಷಕ ಗೋವಿಂದ ಶರ್ಮ ಇವರ ಮುಂದಾಳ್ತನದಲ್ಲಿ ನಡೆದ ಸ್ಪರ್ಧಾ ಕಾರ್ಯಕ್ರಮದ ಒಂದು ನೋಟವನ್ನು ನಿಮ್ಮ ಮುಂದೆ ಇರಿಸುತ್ತಿದ್ದೇವೆ. ಸ್ಪರ್ಧೆಗಳು ವಿವಿಧ ವಿಭಾಗಳಲ್ಲಿ ನಡೆದಿದ್ದು ವಿಜೇತ ವಿದ್ಯಾರ್ಥಿಗಳು ಮುಂದಿನ ತಿಂಗಳು ಬದಿಯಡ್ಕದ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುವ ಉಪಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಅವರಿಗೆ ಶುಭಾಶಯಗಳು...

22 September 2012

ಸಾಹಿತ್ಯ ಶಿಬಿರ 2012

ನಮ್ಮ ಶಾಲೆಯಲ್ಲಿ 21.09.2012 ಶುಕ್ರವಾರ ಜರಗಿದ ‘ಸಾಹಿತ್ಯ ಶಿಬಿರ’ದಲ್ಲಿ ಸಾಹಿತಿ ವಿ.ಬಿ.ಕುಳಮರ್ವ ಕಥಾ ರಚನೆ ಮತ್ತು ಸಾಹಿತಿ ಬಾಲ ಮಧುರಕಾನನ ಕವನ ರಚನೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳಾದ ಅರವಿಂದ ಎಸ್.ವಿ ಸ್ವಾಗತಿಸಿ ಸುಷ್ಮಾ.ಕೆ ವಂದಿಸಿದರು. ರಮ್ಯಶ್ರೀ. ಎ ಪ್ರಾರ್ಥಿಸಿದಳು. ಕ್ಷಮಾದೇವಿ.ಕೆ ಕಾರ್ಯಕ್ರಮ ನಿರೂಪಿಸಿದಳು.

ಚೈತನ್ಯ ಸಂರಕ್ಷಣೆ - ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ

ಕನ್ನಡ, ಮಲಯಾಳ ಮತ್ತು ಆಂಗ್ಲ ಭಾಷಾ ವಿದ್ಯಾರ್ಥಿಗಳನ್ನು ಒಂದೇ ಕೋಣೆಯಲ್ಲಿ ಕೂಡಿಹಾಕಿ ಸ್ಪರ್ಧೆ ನಡೆಸುವ ಕ್ರಮ ತೀರಾ ಸರಿಯಲ್ಲ. ಯಾಕೆಂದರೆ ವಿವಿಧ ಭಾಷೆಗಳನ್ನು, ಶೈಲಿಯನ್ನು ಒಂದೇ ತಕ್ಕ್ಡಿಯಲ್ಲಿ ಇರಿಸಿ ತೂಗುವುದು ಸುಲಭವಲ್ಲ, ಹಾಗೂ ಅನೇಕ ಸಂದರ್ಭದಲ್ಲಿ ಬಹುಮಾನ ಮಲಯಾಳಿ ಪ್ರಾಬಲ್ಯಕ್ಕೆ ಒಳಗಾಗುತ್ತದೆ. ಈ ರೀತಿಯ ಪ್ರಸಂಗಗಳು ನಮ್ಮ ಕಾಸರಗೋಡಿನಲ್ಲಿ ಪದೇ ಪದೇ ಎದುರಾಗುತ್ತದೆ. ಆದರೆ ಮೊನ್ನೆ 20.09.2012 ಗುರುವಾರದಂದು ಬಹುಮಾನ ನಮ್ಮ ಕನ್ನಡದ ಪಾಲಿಗೆ ಒಲಿಯಿತು. ಕೇರಳ ಸರಕಾರದ ಕ್ರೀಡಾ ಮತ್ತು ಯುವಜನ ಖಾತೆಯು ‘ಚೈತನ್ಯ ಸಂರಕ್ಷಣೆ’ಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಳ್ಳೇರಿಯಾ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿನಿ ಕ್ಷಮಾದೇವಿ.ಕೆ ಕನ್ನಡದಲ್ಲಿ ಮಾತನಾಡಿ ಪ್ರಥಮ ಬಹುಮಾನ ‘ಸೈಕಲ್’ ಪಡೆದುಕೊಂಡಳು. ಬೇಳ ಕುಮಾರಮಂಗಲ ನಿವಾಸಿ ಬಾಲಕೃಷ್ಣಮೂರ್ತಿ ಮತ್ತು ಸತ್ಯಶೀಲಾ ಇವರ ಪುತ್ರಿಯಾದ ಈಕೆಗೆ ನಮ್ಮ ಶುಭ ಹಾರೈಕೆಗಳು.

14 September 2012

ಏಣಿಯರ್ಪು ಕಡೆಗೆ ಪ್ರಯಾಣ...


ಇಂದು ನಮ್ಮ ಪ್ರಯಾಣ ನೀರ್ಚಾಲಿನಿಂದ ಮೈಲೊಳಗಿನ ಅಂತರದಲ್ಲಿರುವ ಏಣಿಯರ್ಪು ಇಟ್ಟಿಗೆ ಕಾರ್ಖಾನೆ ಮತ್ತು ಬಿರ್ಮಿನಡ್ಕದಲ್ಲಿರುವ ಕೆಂಪು ಕಲ್ಲಿನ ಗಣಿಯ ಕಡೆಗೆ...  ಇಟ್ಟಿಗೆ ಕಾರ್ಖಾನೆಯಲ್ಲಿ ಮಡಿಕೆ ಮಾಡುವ ವಿಧಾನದ ಬಗ್ಗೆ ಬೇಳ ವಿಷ್ಣುಮೂರ್ತಿ ನಗರದ ದಾಮೋದರ ಪ್ರಾತ್ಯಕ್ಷಿಕೆ ನೀಡಿದರು. ನಂತರ ಕಲ್ಲಿನ ಗಣಿಯನ್ನು ಸಂದರ್ಶಿಸಿದ ವಿದ್ಯಾರ್ಥಿಗಳು ಕಲ್ಲಿನ ಗಣಿಗಳ ಗುಣ ಮತ್ತು ಅವುಗಳಿಂದಾಗುವ ತೊಂದರೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

06 September 2012

ಶಿಕ್ಷಕ ದಿನಾಚರಣೆ

ವಿದ್ಯಾರ್ಥಿಗಳ ಕಾಲುವಾರ್ಷಿಕ ಪರೀಕ್ಷೆ ಇನ್ನೂ ಮುಗಿದಿಲ್ಲ. ಮುಂದಿನ ಸೋಮವಾರ ಮತ್ತು ಮಂಗಳವಾರ ಮತ್ತೆ ಪರೀಕ್ಷೆಗಳಿವೆ. ಈ ಒತ್ತಡಗಳ ನಡುವೆ ನಾವು ಸರಳವಾಗಿ ಶಿಕ್ಷಕರ ದಿನವನ್ನು ಆಚರಿಸಿಕೊಂಡೆವು. ಒಂಬತ್ತನೆಯ ತರಗತಿ ಹುಡುಗ ಆದರ್ಶ ಪೆನ್ಸಿಲ್ ಚಿತ್ರಗಳನ್ನು ಬಿಡಿಸುವುದರಲ್ಲಿ ಚೆನ್ನಾಗಿ ಪಳಗುತ್ತಿದ್ದಾನೆ. ಅವನು ಬಿಡಿಸಿದ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಅವರ ರೇಖಾಚಿತ್ರವನ್ನು ಒಂಬತ್ತನೆಯ ತರಗತಿ ಹುಡುಗರು ಹಿರಿಯ ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ಅವರಿಗೆ ಸಮರ್ಪಿಸಿದರು.

05 September 2012

ಮಕ್ಕಳ ಧ್ವನಿ - 2012

ಮೂಡುಬಿದಿರೆ ವಿದ್ಯಾಗಿರಿಯ ಶಿವರಾಮ ಕಾರಂತ ವೇದಿಕೆಯಲ್ಲಿ ಮೊನ್ನೆ ಸೆಪ್ಟೆಂಬರ್ 1 ಮತ್ತು 2 ನೇ ತಾರೀಕಿನಂದು ಜರಗಿದ ಉಡುಪಿ - ಕಾಸರಗೋಡು ಜಿಲ್ಲೆ ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಹತ್ತೊಂಬತ್ತನೆಯ ‘ಮಕ್ಕಳ ಧ್ವನಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಮ್ಮ ಶಾಲಾ ವಿದ್ಯಾರ್ಥಿಗಳು ರಸಪ್ರಶ್ನೆ ಸಹಿತ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ.

04 September 2012

ವಿಜಯವಾಣಿ ಪತ್ರಿಕೆಯಲ್ಲಿ ನಮ್ಮ ಬ್ಲಾಗ್

ಸ್ನೇಹಿತರೇ, ನಮ್ಮ ‘ಮಹಾಜನ’ ಬ್ಲಾಗ್ ಬಗ್ಗೆ ಕುತೂಹಲ ಹೊಂದಿದ ವೈ.ಜಿ.ಸುರೇಶ್ ಮೊನ್ನೆ ಭಾನುವಾರ ಫೋನ್ ಮಾಡಿದ್ದರು. ಇಷ್ಟು ಪಕ್ಕನೆ ಅವರ ಬರವಣಿಗೆ ಪ್ರಕಟವಾಗುತ್ತದೆಂದು ಎಣಿಸಿರಲಿಲ್ಲ. ಆದರೆ ನಿನ್ನೆ ಸೋಮವಾರದ ಪತ್ರಿಕೆಯಲ್ಲಿಯೇ ನಮ್ಮ ಬಗ್ಗೆ ಮಾಹಿತಿ ಪ್ರಕಟವಾಗಿದೆ. ಧನ್ಯವಾದಗಳು ಸುರೇಶ್...

30 August 2012

ಓಣಂ ಆಚರಣೆ



ಮೊನ್ನೆ 24 ರಂದು, ಓಣಂ ರಜೆ ಆರಂಭವಾಗುವ ಮುನ್ನ ನಮ್ಮ ಶಾಲೆಯಲ್ಲಿ ಓಣಂ ಆಚರಣೆ ಜರಗಿತು. ಗಣಿತ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಹೂರಂಗವಲ್ಲಿಯಲ್ಲಿ ಗಣಿತ ಆಕೃತಿಗಳನ್ನು ಬಿಡಿಸುವ ಸ್ಪರ್ಧೆ, ಮೊಸರು ಕುಡಿಕೆ ಇತ್ಯಾದಿ ಸ್ಪರ್ಧೆಗಳು ಜರಗಿದವು.  ರಕ್ಷಕ ಶಿಕ್ಷಕ ಸಂಘದ ಸದಸ್ಯರು ವಿದ್ಯಾರ್ಥಿಗಳಿಗೆ ‘ಓಣಂ ಊಟ’ವನ್ನು ಬಡಿಸಿದರು.

18 August 2012

ಕಾಗದದ ದೋಣಿ

ಅಧ್ಯಾಪಕರ ಸಾನ್ನಿಧ್ಯದಲ್ಲಿ ನೀರಲ್ಲಿ ಇಳಿದು ಆಟವಾಡುವುದೆಂದರೆ ಮಕ್ಕಳಿಗೆ ತುಂಬಾ ಖುಷಿ. ಪುತ್ತಿಗೆ ಗ್ರಾಮ ಪಂಚಾಯತು ವ್ಯಾಪ್ತಿಯ ಎಡನಾಡು ಗ್ರಾಮದಲ್ಲಿರುವ ಆನಾಡಿಪಳ್ಳ ಮದಕ ಹೆಚ್ಚು ಆಳವಿಲ್ಲದ ನೀರಾಶ್ರಯ, ವರ್ಷಪೂರ್ತಿ ನೀರಿರುವ ಪ್ರದೇಶ. ಅಂತಹ ನೀರ ಜಾಗದಲ್ಲಿ ಕಾಗದದ ದೋಣಿ ಬಿಟ್ಟು ಸಂತಸ ಪಟ್ಟ ವಿದ್ಯಾರ್ಥಿಗಳು...

ಮುಖಾರಿಕಂಡ ಅಣೆಕಟ್ಟಿನ ಕಡೆಗೆ...



ಕಾಲು ವಾರ್ಷಿಕ ಪರೀಕ್ಷೆಗಳ ನಡುವೆ ನಿನ್ನೆ, ನಮ್ಮ ಶಾಲಾ ಯು.ಪಿ ವಿಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದ ದಿನ. ‘ಸೋಣೆ’ ತಿಂಗಳ ‘ಸೋನೆ’ ಮಳೆಯ ನಡುವೆ ಸೀತಾಂಗೋಳಿ ಪರಿಸರದಲ್ಲಿ ಒಂದು ಸುತ್ತಾಟ. ಮುಖಾರಿಕಂಡ ಅಣೆಕಟ್ಟು ಸಂದರ್ಶಿಸಿ, ಕೋಡಿಮೂಲೆಯಲ್ಲಿ ಕಬ್ಬಿಣದ ಕತ್ತಿ ತಯಾರಿಯ ಬಗ್ಗೆ ಮಾಹಿತಿ ತಿಳಿದುಕೊಂಡು ಮರಳಿ ಶಾಲೆ ಸೇರುವಾಗ ಒಂದು ಖುಷಿ...

15 August 2012

ಸ್ವಾತಂತ್ರ್ಯ ಯಾತ್ರೆ

“ಸ್ವಾತಂತ್ರ್ಯ ದಿನದ ಆಚರಣೆ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮವನ್ನು ಬೆಳಗಿಸುತ್ತದೆ. ಆ ಮೂಲಕ ಹಿರಿಯರ  ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯವನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಸ್ವಾತಂತ್ರ್ಯದ ಸಂದೇಶವನ್ನು ಉಳಿಸಿ ದೇಶದ ಹಿತಕ್ಕಾಗಿ ನಾವು ಶ್ರಮಿಸಬೇಕಾಗಿದೆ" ಎಂದು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ನಿಡುಗಳ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಗಳಲ್ಲಿ ಜರಗಿದ ಸ್ವಾತಂತ್ರ್ಯ ಯಾತ್ರೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಧ್ವಜಾರೋಹಣವನ್ನು ನೆರವೇರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಹಿರಿಯ ಶಿಕ್ಷಕರಾದ ಎಸ್.ವಿ.ಭಟ್, ಕೆ.ನಾರಾಯಣ ಭಟ್ ಮತ್ತು ಎಂ.ಸೂರ್ಯನಾರಾಯಣ ಸ್ವಾತಂತ್ರ್ಯ ಸಂಗ್ರಾಮದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಕಾರ್ಯಕ್ರಮದ ಸಂಚಾಲಕ, ಶಿಕ್ಷಕ ಚಂದ್ರಶೇಖರ ರೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಧನ್ಯವಾದ ಸಮರ್ಪಿಸಿದರು.

ವಿದ್ಯಾರ್ಥಿಗಳಿಂದ ನೀರ್ಚಾಲಿನಲ್ಲಿ ಸ್ವಾತಂತ್ರ್ಯ ಮೆರವಣಿಗೆ ನಡೆಯಿತು.

13 August 2012

‘ಹೂ’ಗಳನ್ನು ಉಪಯೋಗಿಸಿ ಭೂಪಟ

ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿಯಾಗಿ ನಮ್ಮ ಶಾಲಾ ಸಮಾಜ ವಿಜ್ಞಾನ ಕ್ಲಬ್ ಆಶ್ರಯದಲ್ಲಿ 10.08.2012 ಶುಕ್ರವಾರ ನಡೆದ ಹೂರಂಗವಲ್ಲಿಯಲ್ಲಿ ಭಾರತ ಭೂಪಟ ಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಿಜೇತರಾದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ತಂಡ ಮತ್ತು ಕೇರಳ ಭೂಪಟ ಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಿಜೇತರಾದ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿನಿಯರ ತಂಡ.