Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

30 December 2011

ಡಾ|ಕಲ್ಲಡ್ಕ ಪ್ರಭಾಕರ ಭಟ್ ಭೇಟಿ...

ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಾವರ್ಗಕ್ಕೆ ಡಾ|ಕಲ್ಲಡ್ಕ ಪ್ರಭಾಕರ ಭಟ್ ಇಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ, ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ. ಗೋವಿಂದ ಭಟ್ ಸ್ವಾಗತಿಸಿದರು.

21 December 2011

ಅದಮ್ಯ ಚೈತನ್ಯ - ಶ್ರೀ ಖಂಡಿಗೆ ಶಾಮ ಭಟ್ಟ


ಬರಹ: ವಾಣಿ.ಪಿ.ಎಸ್ ಬೊಳುಂಬು
ನೀರ್ಚಾಲು.

ಶ್ರೀ
ಖಂಡಿಗೆ ಶಾಮ ಭಟ್ಟರು ಜ್ಞಾನದಲ್ಲಿ, ವಿದ್ವತ್ತಿನಲ್ಲಿ, ಕಾರ್ಯಪ್ರವೃತ್ತಿಯಲ್ಲಿ, ದೈವಭಕ್ತಿಯಲ್ಲಿ ಮತ್ತು ಜೀವನಾನುಭವದಲ್ಲಿತುಂಬಿದ ಕೊಡ’. ಶುಭ್ರ ಶ್ವೇತ ವಸ್ತ್ರ ಅವರ ಅಂತರಂಗದ ಬಿಂಬ. ತೆಳ್ಳನೆಯ ಕಾಯ ಕಟ್ಟುನಿಟ್ಟಿನ ಶಿಸ್ತಿನಾಚರಣೆಯ ಪ್ರತೀಕ. ವಾರ್ಧಕ್ಯದ ಕಾರಣದಿಂದಪ್ರಾಂಶುಪಾಲರು ಇತ್ತೀಚೆಗೆ ಸಾರ್ವಜನಿಕ ವೇದಿಕೆಗೆ ಬರುವುದನ್ನು ನಿಲ್ಲಿಸಿದ್ದರು. ಆದರೆ ಅವರ ಮರಣದ ವಾರ್ತೆ ಹಬ್ಬಿದೊಡನೆ ನಿವಾಸಕ್ಕೆ ಜನರ ಪ್ರವಾಹವೇ ಹರಿದು ಬಂದಿತ್ತು! ಜನಾನುರಾಗಕ್ಕೆ ಜಾತಿ, ಮತದ ಎಲ್ಲೆಯಿಲ್ಲ, ಬಡವ ಬಲ್ಲಿದ ಭೇದವಿಲ್ಲ, ರಾಜಕೀಯ ಪಕ್ಷಗಳ ಚೌಕಟ್ಟಿಲ್ಲ. ಇದಕ್ಕೆ ಕಾರಣ ಅವರ ವ್ಯಕ್ತಿತ್ವ.

೯೨
ವರ್ಷಗಳ ತುಂಬಿದ ಬಾಳು ಅವರದು. ವಯಸ್ಸಿನ ಕಾರಣದಿಂದ ಶರೀರ ದುರ್ಬಲವಾದರೂ, ಅನಾರೋಗ್ಯ ಅವರನ್ನು ಕಾಡಿರಲಿಲ್ಲ. ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ವ್ಯವಸ್ಥಾಪಕರಾಗಿದ್ದು ಇಳಿವಯಸ್ಸಿನಲ್ಲಿಯೂ ಅವರು ಶಾಲೆಗೆ ಸುತ್ತು ಬರುತ್ತಿದ್ದ ದೃಶ್ಯ; ಆಗ ಶಾಲಾ ಪರಿಸರ ಮತ್ತು ಮಕ್ಕಳ ಮೇಲೆ ವ್ಯಕ್ತವಾಗುತ್ತಿದ್ದ ಅವರ ಒಲವು ಈಗ ನೆನಪಾಗಿ ಮಾತ್ರ ಉಳಿದಿದೆ. ಸಂಸ್ಥೆಯಲ್ಲಿ ಕಾರ್ಯಕ್ರಮವೇನಾದರೂ ನಡೆಯುತ್ತಿದ್ದರೆ ಐದು ನಿಮಿಷ ಮೊದಲೇ ಹಾಜರಾಗಿ ವ್ಯವಸ್ಥೆಯ ಬಗ್ಗೆ ವಿಚಾರಿಸುವುದು ಅವರ ರೂಢಿ. ಸಾಹಿತ್ಯ ಸಂಸ್ಕೃತಿಯ ಬಗ್ಗೆ ಸಂದೇಹಗಳನ್ನೇನಾದರೂ ಮುಂದಿಟ್ಟರೆ ಮಾಹಿತಿ ಸಹಿತವಾಗಿ ವಿವರಣೆಯನ್ನು ನೀಡುವ ಸೊಗಸೇ ಬೇರೆ.

ಅವರ
ಆಶ್ರಯದಲ್ಲಿ ಬೆಳೆದವರು ಹಲವರು. ಆದರೆ, ಅವರು ಸ್ವಂತಕ್ಕಾಗಿ ಏನನ್ನೂ ಬೆಳೆಸಿಕೊಳ್ಳಲಿಲ್ಲ. ವೃತ್ತಿ ಜೀವನದಲ್ಲಿದ್ದಾಗ ವೇತನವನ್ನು ತೆಗೆದುಕೊಳ್ಳಲಿಲ್ಲ! ಮತ್ತೆ ನಿವೃತ್ತಿ ವೇತನವನ್ನೂ ಮುಟ್ಟಲಿಲ್ಲ! ಜ್ಞಾನ, ಅನುಭವ ಮತ್ತು ವಿದ್ವತ್ತು ಮಾತ್ರ ಅವರ ಸಂಪಾದನೆ. ‘ಪರೋಪಕಾರಾರ್ಥಮಿದಂ ಶರೀರಂಎಂಬುದಕ್ಕೆ ಅವರು ಪ್ರತ್ಯಕ್ಷ ಪ್ರಮಾಣ.

ವಿನಾದೈನ್ಯೇನ ಜೀವನಂ, ಅನಾಯಾಸೇನ ಮರಣಂಇದು ಎಲ್ಲರ ಇಚ್ಛೆ. ಅವರು ತಮ್ಮ ನಿದ್ದೆಯಲ್ಲಿಯೇ ಸಹಜವಾಗಿ ಚಿರನಿದ್ರೆಯತ್ತ ನಡೆದಿದ್ದರು. ದಶಂಬರ ೧೪ರಂದು ಅವರು ದೈವಾಧೀನರಾಗಿ, ಇಂದಿಗೆ ದಿನಗಳು ಕಳೆದವು, ಆದರೆ ನೆನಪುಗಳು ಹಸುರಾಗಿ ಉಳಿದವು. ಇಂತಹ ಸರಳ, ಪ್ರೇಮಮಯಿ, ತ್ಯಾಗಿ, ಜನಪ್ರಿಯ, ಸಜ್ಜನ, ‘ಮಹಾಜನವ್ಯಕ್ತಿಯ ಚೈತನ್ಯಕ್ಕೆ ಗೌರವಪೂರ್ವಕವಾಗಿ ಭಾವತುಂಬಿದ ನಮನಗಳು.

14 December 2011

ಯುಗಪುರುಷ ಖಂಡಿಗೆ ಶಾಮ ಭಟ್ ಅಸ್ತಂಗತ

ಮಹಾಜನವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಖಂಡಿಗೆ ಶಾಮ ಭಟ್ಟರ ಹೆಸರು ಕನ್ನಡ ನಾಡಿಗೆ ಚಿರಪರಿಚಿತ. ೧೯೧೯ ಸೆ.೨೮ ರಂದು ಖಂಡಿಗೆ ಮಹಾಲಿಂಗ ಭಟ್ಟ ಮತ್ತು ಶಂಕರಿ ದಂಪತಿಯರ ಪುತ್ರನಾಗಿ ಜನಿಸಿದ ಖಂಡಿಗೆ ಶಾಮ ಭಟ್ಟರು ಕನ್ನಡ ನಾಡಿನ ಶಿಕ್ಷಣಲೋಕಕ್ಕೆ ಸಲ್ಲಿಸಿದ ಸೇವೆ ಅಪಾರ. ಗಡಿನಾಡು ನೆಲದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಿದ ಅವರು ಪೆರಡಾಲ ಮಹಾಜನ ಸಂಸ್ಕೃತ ಮಹಾವಿದ್ಯಾಲಯದ ಮಾಧ್ಯಮಿಕ ವಿಭಾಗದಲ್ಲಿ ಪ್ರಾಥಮಿಕ ಕನ್ನಡ ಸಂಸ್ಕೃತ ಶಿಕ್ಷಣ, ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಎಸ್ ಎಸ್ ಎಲ್ ಸಿ, ಮಂಗಳೂರು ಸರಕಾರಿ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್, ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಂಸ್ಕೃತ ಎಂಎ ಪಡೆದ ನಂತರ ಖಾಸಗಿಯಾಗಿ ಅಧ್ಯಯನ ಮಾಡಿ ಕನ್ನಡ ಎಂಎ ಸ್ನಾತಕೋತ್ತರ ಪದವಿಯನ್ನು ಪಡೆದವರು.

ಮುಂದೆ
ಮಹಾಜನ ಸಂಸ್ಕೃತ ಕಾಲೇಜಿನಲ್ಲಿ ಅಧ್ಯಾಪನ ಸೇವೆಯನ್ನು ಆರಂಭಿಸಿದ ಅವರು ಮದರಾಸು, ಕಲ್ಲಿಕೋಟೆ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸದಸ್ಯ, ಕೇರಳ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ, ಫಾಕಲ್ಟಿ ಓಫ್ ಓರಿಯೆಂಟಲ್ ಸ್ಟಡೀಸ್ ಸದಸ್ಯ, ಸಂಸ್ಕೃತ ವಿದ್ಯಾಭ್ಯಾಸ ಸಮಿತಿ ಸದಸ್ಯ, ಕನ್ನಡ ಪಠ್ಯಪುಸ್ತಕ ತಯಾರಿಕೆಗಾಗಿ ನೇಮಿಸಿದ ಸಮಿತಿ ಅಧ್ಯಕ್ಷ, ಕಾಸರಗೋಡು ಕರ್ನಾಟಕ ಸಮಿತಿ ಅಧ್ಯಕ್ಷ, ಪ್ರತಿಷ್ಟಿತ ಕರ್ನಾಟಕ ಬ್ಯಾಂಕ್ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕ, ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ಹಾಗೂ ಕಾಸರಗೋಡು ಕೃಷಿಕರ ಸಹಕಾರೀ ಮಾರಾಟ ಸಂಘದ ಅಧ್ಯಕ್ಷ, ಪೆರಡಾಲ ಮಹಾಜನ ವಿದ್ಯಾಭಿವರ್ಧಕ ಸಂಘದ ಅಧ್ಯಕ್ಷ, ಶಾಲಾ ವ್ಯವಸ್ಥಾಪಕ ಹೀಗೆ ಹತ್ತು ಹಲವು ವಿಭಾಗಗಳಲ್ಲಿ, ಕ್ಷೇತ್ರಗಳಲ್ಲಿ ದುಡಿದವರು. ೧೯೪೬ರಿಂದ ೧೯೬೬ ತನಕ ಮಹಾಜನ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ವಿದ್ವಜ್ಜನರಿಂದ ಶ್ಲಾಘಿಸಲ್ಪಟ್ಟ ಮಹಾನುಭಾವರು ಖಂಡಿಗೆ ಶಾಮ ಭಟ್ಟರು. ೨೭.೦೮.೧೯೭೩ ರಿಂದ ೨೬.೦೧.೨೦೧೧ ತನಕ ಅವರು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಖಂಡಿಗೆ
ಶಾಮ ಭಟ್ಟರ ಪುತ್ರರು ಡಾ| ಸುಬ್ರಹ್ಮಣ್ಯ ಭಟ್, ಡಾ| ಪತಂಜಲಿ, ರಾಮಚಂದ್ರ ಭಟ್, ಕೃಷ್ಣರಾಜ, ಜಯದೇವ ಖಂಡಿಗೆ, ಡಾ| ಗಣೇಶ ಹಾಗೂ ಪುತ್ರಿಯರಾದ ಶಂಕರಿ, ಸುಧಾ, ಪ್ರಭಾ ಮತ್ತು ಮಾಯಾ. ಗಡಿನಾಡು ನೆಲ ಕಾಸರಗೋಡಿನ ಹಿರಿಯ ಕನ್ನಡ ಹೋರಾಟಗಾರ, ಸಂಸ್ಕೃತ ವಿದ್ವಾಂಸ, ತೊಂಭತ್ತೆರಡರ ಹರೆಯದ ಜ್ಞಾನವೃದ್ಧ, ನಿವೃತ್ತ ಪ್ರಾಂಶುಪಾಲ ಖಂಡಿಗೆ ಶಾಮ ಭಟ್ಟರು, ತಮ್ಮ ಪತ್ನಿ ಇಹಲೋಕವನ್ನು ತ್ಯಜಿಸಿ ವರ್ಷ ಕಳೆಯುವುದರ ಮುನ್ನ ೧೪.೧೨.೨೦೧೧ ಬುಧವಾರ ಮುಂಜಾನೆ .೩೦ಕ್ಕೆ ವಿಧಿವಶರಾಗಿದ್ದಾರೆ. ಮೃತರ ಆತ್ಮಕ್ಕೆ ಸದ್ಗತಿಯನ್ನು ಕೋರಿ ಇಂದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮೌನ ಪ್ರಾರ್ಥನೆ ಸಲ್ಲಿಸಿ ಶಾಲೆಗೆ ರಜೆ ಸಾರಲಾಯಿತು. ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ನೀರ್ಚಾಲು ಪೇಟೆಯ ಸಂಸ್ಥೆಗಳು ಖಂಡಿಗೆ ಶಾಮ ಭಟ್ಟರಿಗೆ ಗೌರವ ಸಲ್ಲಿಸಿದವು.

ಶಾಮ
ಭಟ್ಟರ ಆತ್ಮಕ್ಕೆ ನಮ್ಮ ಶ್ರದ್ಧಾಂಜಲಿಗಳು...

13 December 2011

ಮಧ್ಯಾವಧಿ ಪರೀಕ್ಷೆ...

ಸರಕಾರ ಪುನಃ ಕಾಲುವಾರ್ಷಿಕ ಮತ್ತು ಅರ್ಧವಾರ್ಷಿಕ ಪರೀಕ್ಷೆಗಳನ್ನು ಚಾಲ್ತಿಗೆ ತಂದಿದೆ. ಈ ಬಾರಿಯ ಪರೀಕ್ಷಗಳು ನಾಳೆ ಆರಂಭವಾಗುತ್ತವೆ. ಎಲ್ಲ ವಿದ್ಯಾರ್ಥಿಗಳಿಗೂ ಶುಭಾಶಯಗಳು.

07 December 2011

ಶಾಸ್ತ್ರ ಮೇಳದಲ್ಲಿ ರಾಜ್ಯ ಮಟ್ಟಕ್ಕೆ ಐವರು...

ಕಾಞಂಗಾಡಿನಲ್ಲಿ ಜರಗಿದ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ವಿದ್ಯಾರ್ಥಿಗಳ ಶಾಸ್ತ್ರ ಮೇಳದ ಪ್ರೌಢಶಾಲಾ ವಿಭಾಗದಲ್ಲಿ ನಮ್ಮ ಶಾಲೆಯ ಈ ವಿದ್ಯಾರ್ಥಿಗಳು ಕೇರಳ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದ್ದಾರೆ.

ಅಭಿಶೇಕ್ - ವಿಜ್ಞಾನ ಮೇಳದ ಇಂಪ್ರೊವೈಸ್ಡ್ ಎಕ್ಸ್‌ಪೆರಿಮೆಂಟ್ - ದ್ವಿತೀಯ ಸ್ಥಾನ
ಶ್ರೀನಿವಾಸ ಪ್ರಸಾದ್ - ವಿಜ್ಞಾನ ಮೇಳದ ಇಂಪ್ರೊವೈಸ್ಡ್ ಎಕ್ಸ್‌ಪೆರಿಮೆಂಟ್ - ದ್ವಿತೀಯ ಸ್ಥಾನ
ಅನ್ವಿತ್. ಎಸ್ - ವೃತ್ತಿ ಪರಿಚಯ ಮೇಳದ ಮೆಟಲ್ ಎನ್‌ಗ್ರೇವಿಂಗ್ - ದ್ವಿತೀಯ ಸ್ಥಾನ
ಮನೋಜ್. ಯು - ವೃತ್ತಿ ಪರಿಚಯ ಮೇಳದ ಕೊಡೆ ತಯಾರಿ - ಪ್ರಥಮ ಸ್ಥಾನ
ನಿಖಿಲ್ ಎಂ.ಡಿ - ವೃತ್ತಿ ಪರಿಚಯ ಮೇಳದ ಇಲೆಕ್ಟ್ರಿಕಲ್ ವಯರಿಂಗ್ - ಪ್ರಥಮ ಸ್ಥಾನ

ಈ ವಿದ್ಯಾರ್ಥಿಗಳು ಮುಂದಿನ ತಿಂಗಳು ಪಾಲಕ್ಕಾಡಿನಲ್ಲಿ ಜರಗಲಿರುವ ಕೇರಳ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಶುಭಾಶಯಗಳು.

06 December 2011

ಕಾವ್ಯಶ್ರೀ ಮತ್ತು ವಿಶ್ವ ರಾಜ್ಯ ಮಟ್ಟಕ್ಕೆ...

ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಕಾವ್ಯಶ್ರೀ .ಜೆ ಜ್ಯೂನಿಯರ್ ಹುಡುಗಿಯರ ಜ್ಯಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಮತ್ತು ಎಂಟನೇ ತರಗತಿ ವಿದ್ಯಾರ್ಥಿನಿ ವಿಶ್ವ ಸಿ.ಎಚ್ ಸಬ್ ಜೂನಿಯರ್ ಹುಡುಗಿಯರ ೧೦೦ ಮೀ. ಓಟ, ೨೦೦ ಮೀ. ಓಟ ಹಾಗೂ ಲಾಂಗ್ ಜಂಪ್ ವಿಭಾಗದ ಕೇರಳ ರಾಜ್ಯ ಮಟ್ಟದ ಶಾಲಾ ಕ್ರೀಡಾ ಮೇಳ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಇವರು ಇತ್ತೀಚೆಗೆ ನೀಲೇಶ್ವರದಲ್ಲಿ ಜರಗಿದ ಕಂದಾಯ ಜಿಲ್ಲಾ ಶಾಲಾ ಕ್ರೀಡಾಮೇಳದಲ್ಲಿ ವಿವಿಧ ಬಹುಮಾನಗಳನ್ನು ಪಡೆದಿದ್ದಾರೆ.