Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

26 March 2013

‘ಮಹಾಜನ’ರ ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ನಿವೃತ್ತಿ

    ಕಳೆದ 28 ವರ್ಷಗಳಿಂದ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ಸಂಸ್ಕೃತ ಶಿಕ್ಷಕರಾಗಿ ‘ಮಹಾಜನ’ರಿಗೆ ಸಂಸ್ಕೃತದ ಪಾಠಗಳನ್ನು ಹೇಳಿ ‘ಮಹಾಜನ’ರಾದ ಸುಬ್ರಹ್ಮಣ್ಯ ವೆಂಕಟ್ರಮಣ ಭಟ್ (ಎಸ್.ವಿ.ಭಟ್) ಸರಕಾರೀ ಸೇವೆಯಿಂದ ಈ ತಿಂಗಳ ಕೊನೆಗೆ ನಿವೃತ್ತಿ ಹೊಂದಲಿದ್ದಾರೆ. ನಾಳೆ ಈ ಅಧ್ಯಯನ ವರ್ಷದ ಕೊನೆಯ ದಿನವಾದ್ದರಿಂದ ನಾಳೆ ಶ್ರೀ ಎಸ್.ವಿ.ಭಟ್ಟರನ್ನು ಬೀಳ್ಕೊಡುವ ಸಮಾರಂಭ ಶಾಲೆಯಲ್ಲಿ ಜರಗಲಿದೆ. 1956 ದಶಂಬರ 11 ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ಸನಿಹದ ಮೂರೂರಿನಲ್ಲಿ ವೆಂಕಟರಮಣ ಭಟ್ ಮತ್ತು ಗಂಗಾ ಇವರ ಪುತ್ರನಾಗಿ ಜನಿಸಿದ ಎಸ್.ವಿ.ಭಟ್ ಶಿಕ್ಷಕನಾಗಿ ಕಾಸರಗೋಡಿನ ಕನ್ನಡಿಗರಿಗೆ ಅನುಪಮ ಸೇವೆ ಸಲ್ಲಿಸಿದ್ದಾರೆ.

    1972ರಲ್ಲಿ ಎಸ್.ಎಸ್.ಎಲ್.ಸಿ, 1977ರಲ್ಲಿ ಪದವಿಯನ್ನು ಪಡೆದ ಎಸ್.ವಿ.ಭಟ್ಟರು ಮೈಸೂರು ವಿಶ್ವವಿದ್ಯಾನಿಲಯದಿಂದ 1981ರಲ್ಲಿ ಬಿ.ಎಡ್ ಪದವಿಯನ್ನು ಪಡೆದರು. ಬಳಿಕ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗವನ್ನು ನಿರ್ವಹಿಸಿ ಕರಾವಳಿಯ ನಂಟನ್ನು ಹಿಡಿದು ಕಾಸರಗೋಡಿಗೆ ಆಗಮಿಸಿದ ಅವರು ಏತಡ್ಕದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1982 ಜನವರಿ 18 ರಂದು ಸಂಸ್ಕೃತ ಶಿಕ್ಷಕನಾಗಿ ಸೇವೆ ಆರಂಭಿಸಿದ್ದರು. ಸುತ್ತಲೂ ಹರಿಯುತ್ತಿದ್ದ ಹೊಳೆಗಳಿಂದಾಗಿ ‘ದ್ವೀಪ’ದಂತಿದ್ದ ಏತಡ್ಕದಲ್ಲಿನ ಜೀವನ ಅವರಿಗೆ ಅವಿಸ್ಮರಣೀಯ ಅನುಭವವನ್ನು ಕಟ್ಟಿಕೊಟ್ಟಿದೆ. “ಸನಿಹದ ಗೆಳೆಯರೊಂದಿಗೆ ಬಾಳೆದಂಡಿನ ತೆಪ್ಪವನ್ನು ಮಾಡಿ ಹೊಳೆಯಲ್ಲಿ ತೇಲಿಸಿ ಪ್ರಯೋಗ ಶೀಲರಾಗುತ್ತಿದ್ದ ನೆನಪು ಈಗಲೂ ಹಸಿಯಾಗಿದೆ, ಹಸಿರಾಗಿದೆ” ಎನ್ನುತ್ತಾರೆ ಎಸ್.ವಿ.ಭಟ್.

    ಮುಂದೆ 1985 ಅಗೋಸ್ತು 6 ರಂದು ನೀರ್ಚಾಲು ಶಾಲೆ ಅವರನ್ನು ಕೈಬೀಸಿ ಕರೆಯಿತು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಂಸ್ಕೃತ ಶಿಕ್ಷಕನಾಗಲು ಸಿಕ್ಕಿದ ಅವಕಾಶವನ್ನು ಅವರು ಕೈಚೆಲ್ಲದೆ ಉದ್ಯೋಗದಲ್ಲಿ ಭಡ್ತಿಯನ್ನು ಪಡೆದ ಅವರು ತಮ್ಮ ವಾಸ, ವೃತ್ತಿಯನ್ನು ನೀರ್ಚಾಲಿಗೆ ವರ್ಗಾಯಿಸಿಕೊಂಡರು. ಉದ್ಯೋಗ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿಯೇ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ 1994ರಲ್ಲಿ ಸಂಸ್ಕೃತ ಸ್ನಾತಕೋತ್ತರ ಪದವಿಯನ್ನೂ ಅವರು ಪಡೆದಿದ್ದಾರೆ. “ಒಂದು ಕಾಲದಲ್ಲಿ ಪೂರ್ಣವಾಗಿ ಸಂಸ್ಕೃತದ ಶಿಕ್ಷಣದ ಕೇಂದ್ರವಾಗಿದ್ದ ಸಂಸ್ಥೆಯಲ್ಲಿ ಸಂಸ್ಕೃತದ ಶಿಕ್ಷಕನಾಗಲು ಅವಕಾಶ ದೊರೆತದ್ದು ನನ್ನ ಪಾಲಿನ ಸುಯೋಗ” ಎಂದು ಅವರು ನೆನಪಿಸಿಕೊಳ್ಳುತ್ತಾರೆ.

    ನೀರ್ಚಾಲಿನ ವಿದ್ಯಾರ್ಥಿಗಳನ್ನು ಪಾಠ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಹುರಿದುಂಬಿಸಿದ ಅವರು ಶಾಲಾ ವಾರ್ಷಿಕೋತ್ಸವದ ಸಂದರ್ಭಗಳಲ್ಲಿ ನಾಟಕಗಳಲ್ಲೂ ಅಭಿನಯಿಸಿದ್ದರು. ಶಾಲಾ ಶಿಕ್ಷಕ ವೃಂದದ ಯಕ್ಷಗಾನ ತಾಳಮದ್ದಳೆಯ ತಂಡಗಳಲ್ಲಿ ಭಾಗವತರಾಗಿ, ಅರ್ಥಧಾರಿಯಾಗಿ ವಿವಿಧ ಪಾತ್ರಗಳನ್ನು ಸಮರ್ಪಕವಾಗಿ ಮಂಡಿಸಿದ್ದಾರೆ. ಪ್ರತೀ ವರ್ಷ ಶಾಲೆಯಲ್ಲಿ ಜರಗುವ ಶ್ರೀಶಾರದಾ ಪೂಜೆಯ ಸಂದರ್ಭದಲ್ಲಿ ಶ್ರೀದೇವಿಗೆ ಸಮರ್ಪಿಸುವ ‘ಅಷ್ಟಾವಧಾನ’ದ ಗೌರವವೂ ಇವರಿಗೆ ದೊರಕಿದೆ.

    ಶಾಲಾ ಕಾರ್ಯಕ್ರಮಗಳಲ್ಲಿ ಮೈಕ್ ಜೋಡಿಸುವುದರಿಂದ ಆರಂಭಿಸಿ ಸಭಾ ಕಾರ್ಯಕ್ರಮದ ನಿರ್ವಹಣೆಯ ತನಕ ವಿವಿಧ ಜವಾಬ್ದಾರಿಗಳನ್ನು ಪೂರೈಸಿ ಕಿರಿಯರಿಗೆ ಮಾರ್ಗದರ್ಶನವೂ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಶಿಕ್ಷಕ ವೃಂದದ ಸಹಕಾರದೊಂದಿಗೆ ಶಾಲಾ ವಿದ್ಯಾರ್ಥಿಗಳನ್ನು ಸಂಸ್ಕೃತ ತಾಳಮದ್ದಳೆಗಾಗಿ ತರಬೇತುಗೊಳಿಸಿ, ಮಂಗಳೂರು ಆಕಾಶವಾಣಿಯಲ್ಲಿ ವಿದ್ಯಾರ್ಥಿಗಳ ಕಾರ್ಯಕ್ರಮವು ಪ್ರಸಾರವಾಗಲು ಎಸ್.ವಿ.ಭಟ್ ಕಾರಣೀಭೂತರಾಗಿದ್ದಾರೆ.

    ಶಾಲಾ ಕಲೋತ್ಸವದ ‘ಸಂಸ್ಕೃತ’ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಕಠಿಣವಾಗುತ್ತಿದ್ದ ಅಷ್ಟಪದಿ, ಪಾಠಕಂ, ಚಂಪೂ ಪ್ರಭಾಷಣಂ ಇತ್ಯಾದಿಗಳ ತರಬೇತಿಯನ್ನು ವಿದ್ಯಾರ್ಥಿಗಳಿಗೆ ಸರಳವಾಗಿ ನೀಡಿ ಅನೇಕ ಮಂದಿ ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆಯುವಲ್ಲಿ ಎಸ್.ವಿ.ಭಟ್ ಮಹತ್ತರ ಪಾತ್ರ ನಿರ್ವಹಿಸಿದ್ದಾರೆ. ಸಂಸ್ಕೃತ ಶಿಕ್ಷಕರಿಗಾಗಿ ನಡೆದ ವಿವಿಧ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಅವರು ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವ ಸ್ಪರ್ಧೆಗಳಲ್ಲಿ ಅನೇಕ ಬಾರಿ ನೀರ್ಚಾಲು ಶಾಲೆಯು ಸಮಗ್ರ ಪ್ರಶಸ್ತಿಯನ್ನು ಪಡೆದು, ಶಾಲೆಯ ಕೀರ್ತಿ ಪತಾಕೆಯು ಹಾರಾಡುತ್ತಿರುವಂತೆ ಅವರು ಗಮನಿಸಿದ್ದಾರೆ. ಆಧುನಿಕ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಿ ವಿದ್ಯಾರ್ಥಿಗಳ ಚಟುವಟಿಕೆಯನ್ನು ಪ್ರತಿಬಿಂಬಿಸಲು ಪ್ರಪ್ರಥಮವಾಗಿ ಶಾಲೆಯೊಂದು ಆರಂಭಿಸಿದ ‘ಬ್ಲಾಗ್’ ಎಂಬ ಕೀರ್ತಿಗೆ ಪಾತ್ರವಾದ ನಮ್ಮ ‘ಮಹಾಜನ’ ಬ್ಲಾಗನ್ನು ಅವರು ಅಪಾರವಾಗಿ ಪ್ರೋತ್ಸಾಹಿಸಿದ್ದಾರೆ.

    ಬಹುಮುಖಿ ವ್ಯಕ್ತಿತ್ವದ ಎಸ್.ವಿ.ಭಟ್ ಸಂಸ್ಕೃತ ಶಿಕ್ಷಕರಾಗಿ ವೃತ್ತಿಯಿಂದ ನಿರ್ಗಮಿಸುತ್ತಿದ್ದರೂ ಪ್ರವೃತ್ತಿಯಿಂದ ಮುಂದುವರಿಯಲಿದ್ದಾರೆ. ಪತ್ನಿ ಜಯಶ್ರೀ, ಪುತ್ರ ನವೀನ್ ಮತ್ತು ಪುತ್ರಿ ನಮೃತಾ ಜೊತೆ ಸಂತೃಪ್ತ ಜೀವನವನ್ನು ಸಾಗಿಸುತ್ತಿರುವ ಎಸ್.ವಿ.ಭಟ್ಟರ ನಿವೃತ್ತ ಜೀವನವು ಇನ್ನಷ್ಟು ಸುಖಮಯವಾಗಲಿ, ಶಾರದಾ ಮಾತೆಗೆ ಅವರು ಸಲ್ಲಿಸುತ್ತಿರುವ ಸೇವೆ ಮುಂದುವರಿಯಲಿ ಎಂದು ಅವರ ಶಿಷ್ಯವರ್ಗ, ಆಪ್ತವರ್ಗ ಹಾರೈಸುತ್ತಿದೆ.

No comments:

Post a Comment