Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

14 December 2011

ಯುಗಪುರುಷ ಖಂಡಿಗೆ ಶಾಮ ಭಟ್ ಅಸ್ತಂಗತ

ಮಹಾಜನವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಖಂಡಿಗೆ ಶಾಮ ಭಟ್ಟರ ಹೆಸರು ಕನ್ನಡ ನಾಡಿಗೆ ಚಿರಪರಿಚಿತ. ೧೯೧೯ ಸೆ.೨೮ ರಂದು ಖಂಡಿಗೆ ಮಹಾಲಿಂಗ ಭಟ್ಟ ಮತ್ತು ಶಂಕರಿ ದಂಪತಿಯರ ಪುತ್ರನಾಗಿ ಜನಿಸಿದ ಖಂಡಿಗೆ ಶಾಮ ಭಟ್ಟರು ಕನ್ನಡ ನಾಡಿನ ಶಿಕ್ಷಣಲೋಕಕ್ಕೆ ಸಲ್ಲಿಸಿದ ಸೇವೆ ಅಪಾರ. ಗಡಿನಾಡು ನೆಲದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಿದ ಅವರು ಪೆರಡಾಲ ಮಹಾಜನ ಸಂಸ್ಕೃತ ಮಹಾವಿದ್ಯಾಲಯದ ಮಾಧ್ಯಮಿಕ ವಿಭಾಗದಲ್ಲಿ ಪ್ರಾಥಮಿಕ ಕನ್ನಡ ಸಂಸ್ಕೃತ ಶಿಕ್ಷಣ, ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಎಸ್ ಎಸ್ ಎಲ್ ಸಿ, ಮಂಗಳೂರು ಸರಕಾರಿ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್, ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಂಸ್ಕೃತ ಎಂಎ ಪಡೆದ ನಂತರ ಖಾಸಗಿಯಾಗಿ ಅಧ್ಯಯನ ಮಾಡಿ ಕನ್ನಡ ಎಂಎ ಸ್ನಾತಕೋತ್ತರ ಪದವಿಯನ್ನು ಪಡೆದವರು.

ಮುಂದೆ
ಮಹಾಜನ ಸಂಸ್ಕೃತ ಕಾಲೇಜಿನಲ್ಲಿ ಅಧ್ಯಾಪನ ಸೇವೆಯನ್ನು ಆರಂಭಿಸಿದ ಅವರು ಮದರಾಸು, ಕಲ್ಲಿಕೋಟೆ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸದಸ್ಯ, ಕೇರಳ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ, ಫಾಕಲ್ಟಿ ಓಫ್ ಓರಿಯೆಂಟಲ್ ಸ್ಟಡೀಸ್ ಸದಸ್ಯ, ಸಂಸ್ಕೃತ ವಿದ್ಯಾಭ್ಯಾಸ ಸಮಿತಿ ಸದಸ್ಯ, ಕನ್ನಡ ಪಠ್ಯಪುಸ್ತಕ ತಯಾರಿಕೆಗಾಗಿ ನೇಮಿಸಿದ ಸಮಿತಿ ಅಧ್ಯಕ್ಷ, ಕಾಸರಗೋಡು ಕರ್ನಾಟಕ ಸಮಿತಿ ಅಧ್ಯಕ್ಷ, ಪ್ರತಿಷ್ಟಿತ ಕರ್ನಾಟಕ ಬ್ಯಾಂಕ್ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕ, ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ಹಾಗೂ ಕಾಸರಗೋಡು ಕೃಷಿಕರ ಸಹಕಾರೀ ಮಾರಾಟ ಸಂಘದ ಅಧ್ಯಕ್ಷ, ಪೆರಡಾಲ ಮಹಾಜನ ವಿದ್ಯಾಭಿವರ್ಧಕ ಸಂಘದ ಅಧ್ಯಕ್ಷ, ಶಾಲಾ ವ್ಯವಸ್ಥಾಪಕ ಹೀಗೆ ಹತ್ತು ಹಲವು ವಿಭಾಗಗಳಲ್ಲಿ, ಕ್ಷೇತ್ರಗಳಲ್ಲಿ ದುಡಿದವರು. ೧೯೪೬ರಿಂದ ೧೯೬೬ ತನಕ ಮಹಾಜನ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ವಿದ್ವಜ್ಜನರಿಂದ ಶ್ಲಾಘಿಸಲ್ಪಟ್ಟ ಮಹಾನುಭಾವರು ಖಂಡಿಗೆ ಶಾಮ ಭಟ್ಟರು. ೨೭.೦೮.೧೯೭೩ ರಿಂದ ೨೬.೦೧.೨೦೧೧ ತನಕ ಅವರು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಖಂಡಿಗೆ
ಶಾಮ ಭಟ್ಟರ ಪುತ್ರರು ಡಾ| ಸುಬ್ರಹ್ಮಣ್ಯ ಭಟ್, ಡಾ| ಪತಂಜಲಿ, ರಾಮಚಂದ್ರ ಭಟ್, ಕೃಷ್ಣರಾಜ, ಜಯದೇವ ಖಂಡಿಗೆ, ಡಾ| ಗಣೇಶ ಹಾಗೂ ಪುತ್ರಿಯರಾದ ಶಂಕರಿ, ಸುಧಾ, ಪ್ರಭಾ ಮತ್ತು ಮಾಯಾ. ಗಡಿನಾಡು ನೆಲ ಕಾಸರಗೋಡಿನ ಹಿರಿಯ ಕನ್ನಡ ಹೋರಾಟಗಾರ, ಸಂಸ್ಕೃತ ವಿದ್ವಾಂಸ, ತೊಂಭತ್ತೆರಡರ ಹರೆಯದ ಜ್ಞಾನವೃದ್ಧ, ನಿವೃತ್ತ ಪ್ರಾಂಶುಪಾಲ ಖಂಡಿಗೆ ಶಾಮ ಭಟ್ಟರು, ತಮ್ಮ ಪತ್ನಿ ಇಹಲೋಕವನ್ನು ತ್ಯಜಿಸಿ ವರ್ಷ ಕಳೆಯುವುದರ ಮುನ್ನ ೧೪.೧೨.೨೦೧೧ ಬುಧವಾರ ಮುಂಜಾನೆ .೩೦ಕ್ಕೆ ವಿಧಿವಶರಾಗಿದ್ದಾರೆ. ಮೃತರ ಆತ್ಮಕ್ಕೆ ಸದ್ಗತಿಯನ್ನು ಕೋರಿ ಇಂದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮೌನ ಪ್ರಾರ್ಥನೆ ಸಲ್ಲಿಸಿ ಶಾಲೆಗೆ ರಜೆ ಸಾರಲಾಯಿತು. ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ನೀರ್ಚಾಲು ಪೇಟೆಯ ಸಂಸ್ಥೆಗಳು ಖಂಡಿಗೆ ಶಾಮ ಭಟ್ಟರಿಗೆ ಗೌರವ ಸಲ್ಲಿಸಿದವು.

ಶಾಮ
ಭಟ್ಟರ ಆತ್ಮಕ್ಕೆ ನಮ್ಮ ಶ್ರದ್ಧಾಂಜಲಿಗಳು...

1 comment: