ಭಾರತ ಇಂದು ಗಣತಂತ್ರದಿನವನ್ನು ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಶಾಲೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ನಮ್ಮ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ ಭಟ್ ಧ್ವಜಾರೋಹಣ ನೆರವೇರಿಸಿದರು. ನಿವೃತ್ತ ಶಿಕ್ಷಕರಾದ ವಿ.ಮಹಾಲಿಂಗ ಭಟ್, ಡಿ.ರಾಮಕೃಷ್ಣ ಭಟ್ ಮತ್ತು ಅಧ್ಯಾಪಕ ಬಂಧುಗಳು ಉಪಸ್ಥಿತರಿದ್ದರು. ನಿಮಗೆಲ್ಲರಿಗೂ ಗಣತಂತ್ರ ದಿನದ ಶುಭಾಶಯಗಳನ್ನು ಕೋರುತ್ತೇವೆ.
ಒಂಭತ್ತನೇ ತರಗತಿಯ ಹುಡುಗಿ ಪ್ರಸೀದಾ.ಕೆ ನೀರ್ಚಾಲು ಸನಿಹದ ಕುಮಾರಮಂಗಲದ ಹುಡುಗಿ. ಸಹಜವಾಗಿ ಕುಮಾರಮಂಗಲದಲ್ಲೂ ಪರಿಸರದಲ್ಲೂ ಜರಗಿದ ಯಕ್ಷಗಾನ ಬಯಲಾಟಗಳು ಅವಳ ಮೇಲೆ ಪ್ರಭಾವ ಬೀರಿವೆ. ಆಂಟ್ಸ್ ಆನಿಮೇಷನ್ ತರಬೇತಿಯನ್ನೂ ಪಡೆದಿರುವ ಇವಳು ತುಂಬ ಆಕರ್ಷಕವಾದ ಆನಿಮೇಷನ್ ವೀಡಿಯೋಗಳನ್ನೂ ಸೃಷ್ಟಿಸಿದ್ದಾಳೆ.
ಚೆರ್ಕಳ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುತ್ತಿರುವ ಕಾಸರಗೋಡು ಜಿಲ್ಲಾ ಶಾಲಾ ವಿದ್ಯಾರ್ಥಿಗಳ ಕಲೋತ್ಸವದಲ್ಲಿ ಸಾಧನೆ ಮೆರೆದ ನಮ್ಮ ಶಾಲೆಯ ಈ ವಿದ್ಯಾರ್ಥಿಗಳು ಈ ತಿಂಗಳ ಕೊನೆಗೆ ತ್ರಿಶ್ಶೂರಿನಲ್ಲಿ ಜರಗಲಿರುವ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.
ರಂಜನಾ. ಕೆ - ಜಾನಪದ ನೃತ್ಯ - ಪ್ರಥಮ ಸ್ಥಾನ ( ಈಕೆ ನಮ್ಮ ಶಾಲಾ ಹಿರಿಯ ಶಿಕ್ಷಕ ಕೆ.ಶಂಕರನಾರಾಯಣ ಶರ್ಮ ಮತ್ತು ವಿಜಯಲಕ್ಷ್ಮಿ ದಂಪತಿಗಳ ಪುತ್ರಿ)
ಭಾಗ್ಯಶ್ರೀ .ಕೆ.ಎಸ್ - ಕಥಕ್ಕಳಿ ಸಂಗೀತ - ಪ್ರಥಮ ಸ್ಥಾನ ( ಈಕೆ ಮುಳ್ಳೇರಿಯಾದ ಅಧ್ಯಾಪಕ ದಂಪತಿಗಳಾದ ಸತ್ಯಶಂಕರ.ಕೆ ಮತ್ತು ಶ್ರೀಕಲಾ ಇವರ ಪುತ್ರಿ)
ಶಾಂತಿ.ಕೆ - ಸಮಸ್ಯಾಪೂರಣಂ - ಪ್ರಥಮ ಸ್ಥಾನ ( ಈಕೆ ನಿವೃತ್ತ ಮುಖ್ಯೋಪಾಧ್ಯಾಯ ಕೆ.ಗಣೇಶ್ ಭಟ್ ಮತ್ತು ಉಮಾಮಹೇಶ್ವರಿ ಇವರ ಪುತ್ರಿ)
“ಹಿರಿಯ ಚೇತನ ಖಂಡಿಗೆ ಶಾಮ ಭಟ್ಟರು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ವ್ಯವಸ್ಥಾಪಕರಾಗಿದ್ದಾಗ ಇಳಿವಯಸ್ಸಿನಲ್ಲಿಯೂ ಅವರು ಶಾಲೆಗೆ ಸುತ್ತು ಬರುತ್ತಿದ್ದ ದೃಶ್ಯ; ಆಗ ಶಾಲಾ ಪರಿಸರ ಮತ್ತು ಮಕ್ಕಳ ಮೇಲೆ ವ್ಯಕ್ತವಾಗುತ್ತಿದ್ದ ಅವರ ಒಲವು ಈಗ ನೆನಪಾಗಿ ಮಾತ್ರ ಉಳಿದಿದೆ. ಸಂಸ್ಥೆಯಲ್ಲಿ ಕಾರ್ಯಕ್ರಮವೇನಾದರೂ ನಡೆಯುತ್ತಿದ್ದರೆ ಐದು ನಿಮಿಷ ಮೊದಲೇ ಹಾಜರಾಗಿ ವ್ಯವಸ್ಥೆಯ ಬಗ್ಗೆ ವಿಚಾರಿಸುವುದು ಅವರ ರೂಢಿ. ಸಾಹಿತ್ಯ ಸಂಸ್ಕೃತಿಯ ಬಗ್ಗೆ ಸಂದೇಹಗಳನ್ನೇನಾದರೂ ಮುಂದಿಟ್ಟರೆ ಮಾಹಿತಿ ಸಹಿತವಾಗಿ ವಿವರಣೆಯನ್ನು ನೀಡುವ ಸೊಗಸು ಅನನ್ಯ, ಅನುಪಮ” ಎಂದು ನಮ್ಮ ಶಾಲಾ ನಿವೃತ್ತ ಶಿಕ್ಷಕ ವಿ. ಮಹಾಲಿಂಗ ಭಟ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜರಗಿದ ‘ಶ್ರೀ ಖಂಡಿಗೆ ಶಾಮ ಭಟ್ಟರ ಸಂಸ್ಮರಣಾ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಮಹಾಜನ ವಿದ್ಯಾ ಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್, ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಾಲಿಂಗ ಪಾಟಾಳಿ, ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಗೋಪಾಲಕೃಷ್ಣ ಮುಖಾರಿ ಪೆರ್ಣೆ, ಶಾಲಾ ಅಧ್ಯಾಪಕರಾದ ಎಸ್.ವಿ.ಭಟ್, ಕನ್ನೆಪ್ಪಾಡಿ ನಾರಾಯಣ ಭಟ್, ಕೆ.ಶಂಕರನಾರಾಯಣ ಶರ್ಮ, ವಾಣಿ ಪಿ.ಎಸ್, ಚಂದ್ರಶೇಖರ ರೈ ಮತ್ತು ಶಾಲಾ ವಿದ್ಯಾರ್ಥಿಗಳಾದ ವರ್ಷಾ.ಕೆ, ಶಾಂತಿ.ಕೆ, ಅನುಶ್ರೀ.ಕೆ, ಸ್ವಾತಿ ಮಯ್ಯ, ಗುರುವಿನಯಕೃಷ್ಣ.ಕೆ, ಶಶಾಂಕ ಶರ್ಮ.ಎಸ್, ಕೃಷ್ಣಮೂರ್ತಿ ಪಿ.ವಿ, ಕ್ಷಮಾದೇವಿ.ಕೆ, ಶ್ರದ್ಧಾ.ಎಸ್, ಶ್ರೀಶ.ಕೆ, ಮಂದಸ್ಮಿತ.ಎ ಇವರು ಖಂಡಿಗೆ ಶಾಮ ಭಟ್ಟರ ಆತ್ಮಕ್ಕೆ ನುಡಿನಮನಗಳನ್ನು ಸಲ್ಲಿಸಿದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಸ್ವಾಗತಿಸಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಧನ್ಯವಾದ ಸಮರ್ಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಎಂ.ಸೂರ್ಯನಾರಾಯಣ ಕಾರ್ಯಕ್ರಮ ನಿರೂಪಿಸಿದರು.