Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

31 August 2010

ನಾಳೆ ಶ್ರೀಕೃಷ್ಣ ಜನ್ಮಾಷ್ಟಮಿ, ಬನ್ನಿ...

ನಾಳೆ ಅಷ್ಟಮಿ, ನಾಳೆ ಬೆಳಗ್ಗೆ ನಮ್ಮಲ್ಲಿ ಸಭಾ ಕಾರ್ಯಕ್ರಮ, ಪೂರ್ವ ವಿದ್ಯಾರ್ಥಿ ಶ್ರೀ ಸರಳಿ ಈಶ್ವರಪ್ರಕಾಶ್ ಅವರಿಂದ ಗಾನ ಸುಧೆ ಹರಿಯಲಿದ್ದೆ, ನೀವೆಲ್ಲರೂ ಬನ್ನಿ, ಕಾರ್ಯಕ್ರಮವನ್ನು ಚಂದಗೊಳಿಸೋಣ...

27 August 2010

‘ಗಣಕ ಯಂತ್ರ ಆಧುನಿಕ ಜಗತ್ತಿನ ಅವಿಭಾಜ್ಯ ಅಂಗ’

“ಹಿಂದಿನ ಕಾಲದ ವಿದ್ಯಾಭ್ಯಾಸ ಪದ್ಧತಿಗಿಂತ ಭಿನ್ನವಾಗಿ ಹೊಸ ತಲೆಮಾರಿನ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ದೊರೆಯುತ್ತಿದೆ. ಯಾವುದೇ ಕಛೇರಿ ಸಂದರ್ಶಿಸಿದರೂ ಬಹುಪಾಲು ಚಟುವಟಿಕೆಗಳು ಗಣಕ ಯಂತ್ರದ ಮೂಲಕ ಜರಗುತ್ತಿರುವುದನ್ನು ಕಾಣಬಹುದು. ಕಂಪ್ಯೂಟರ್ ಸಾಕ್ಷರತೆಯ ಆವಶ್ಯಕತೆ ಈಗ ಹೆಚ್ಚುತ್ತಿದೆ ಎಂಬುದಕ್ಕೆ ಇದು ನಿದರ್ಶನವಾಗಿದೆ. ಈಗಿನ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ದೊರೆಯುತ್ತಿರುವುದು ಮತ್ತು ಇಂತಹ ಕಾರ್ಯಾಗಾರಗಳ ಮೂಲಕ ಬಳಕೆಯಲ್ಲಿ ನೈಪುಣ್ಯ ಪಡೆಯಲು ಸಾಧ್ಯವಾಗುತ್ತಿರುವುದು ಮತ್ತಷ್ಟು ಸಂತಸದ ಸಂಗತಿ" ಎಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ, ನೀರ್ಚಾಲು ಘಟಕದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಕೇರಳ ರಾಜ್ಯ ಐಟಿ ಸ್ಕೂಲ್ ಪ್ರೋಜೆಕ್ಟ್ ಕಾಸರಗೋಡು ವಿಭಾಗದ ಆಶ್ರಯದಲ್ಲಿ ನಡೆಯುತ್ತಿರುವ ವಿವಿಧ ಶಾಲೆಗಳ ಆಯ್ದ ವಿದ್ಯಾರ್ಥಿಗಳ ಎರಡು ದಿನಗಳ “ಗಣಕ ಯಂತ್ರ ಚಟುವಟಿಕೆಗಳತ್ತ ನೈಪುಣ್ಯ ಗಳಿಕೆ ಕಾರ್ಯಾಗಾರ”ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಪೆರಡಾಲ ಮಹಾಜನ ವಿದ್ಯಾಭಿವರ್ಧಕ ಸಂಘದ ಕಾರ್ಯದರ್ಶಿ ಜಯದೇವ ಖಂಡಿಗೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅನುಭವಿ ಕಂಪ್ಯೂಟರ್ ತಂತ್ರಜ್ಞ ವೇಣುಗೋಪಾಲ ಆರೋಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ರಾಜಶೇಖರ ಪದ್ಮಾರು ಪ್ರಾಸ್ತಾವಿಕ ಭಾಷಣ ಮಾಡಿದರು. ವಿದ್ಯಾರ್ಥಿಗಳಾದ ಸುಬ್ರಹ್ಮಣ್ಯ ಪ್ರಸಾದ ಸ್ವಾಗತಿಸಿ ಸುಶೀಲ.ಎಸ್ ವಂದಿಸಿದರು. ಶಾಂತಿ.ಕೆ ಕಾರ್ಯಕ್ರಮ ನಿರೂಪಿಸಿದರು.

20 August 2010

ಓಣಂ ಹಬ್ಬದ ಶುಭಾಶಯಗಳು....



ಶಾಲಾ ವಿದ್ಯಾರ್ಥಿಗಳಿಗೆ ಇಂದಿನಿಂದ ಒಂದು ವಾರ ಓಣಂ ರಜೆ. ಈ ಮಧ್ಯೆ ಓಣಂ ಹಬ್ಬದ ಸಂತಸ. ಈ ಕಾರಣದಿಂದಾಗಿ ಶಾಲಾ ಮಟ್ಟದಲ್ಲಿ ಇಂದು ಮಾವೇಲಿ ಮೆರವಣಿಗೆ. ಸಿಹಿ ತಿಂಡಿ ಹಂಚೋಣ, ಹೂ ರಂಗವಲ್ಲಿ ಸ್ಪರ್ಧೆಗಳು ಜರಗಿದವು. ನಿಮಗೆಲ್ಲ ಶುಭಾಶಯಗಳು...

18 August 2010

‘ಕ್ವಿಟ್ ಇಂಡಿಯಾ’ ಮಾದರಿ

ಈ ಬಾರಿಯ ಸ್ವಾತಂತ್ರ್ಯೋತ್ಸವ ನೀರ್ಚಾಲು ಪರಿಸರದಲ್ಲಿ ಹೊಸ ಅನುಭವದ ಸ್ಪರ್ಶ ನೀಡಿತು. ನಮ್ಮ ಕಿರಿಯ ಪ್ರಾಥಮಿಕ ಶಾಲೆಯ ಪುಟಾಣಿ ವಿದ್ಯಾರ್ಥಿಗಳು ಶ್ವೇತ ವಸ್ತ್ರ ಧಾರಿಗಳಾಗಿ ಪೇಟೆಯಲ್ಲಿ ೧೯೪೨ ರಲ್ಲಿ ಜರಗಿದ ‘ಕ್ವಿಟ್ ಇಂಡಿಯಾ’ ಮಾದರಿಯ ಚಳುವಳಿಯನ್ನು ಪ್ರದರ್ಶಿಸಿದರು.
“ಕ್ವಿಟ್, ಕ್ವಿಟ್, ಕ್ವಿಟ್ ಇಂಡಿಯಾ”
“ನಮಗೆ ಸ್ವಾತಂತ್ರ್ಯ ಕೊಡಿ, ಭಾರತ ಬಿಟ್ಟು ತೊಲಗಿ”
“ಮಹಾತ್ಮಾ ಗಾಂಧೀಜೀ ಕೀ ಜೈ" ಎಂಬೀ ಘೋಷಣೆಗಳನ್ನು ಕೂಗುತ್ತಾ ಪುಟಾಣಿ ವಿದ್ಯಾರ್ಥಿಗಳು ಪೇಟೆಯಲ್ಲಿ ಪ್ರದರ್ಶನ ನಡೆಸಿದರು. ಅಧ್ಯಾಪಕ ಚಂದ್ರಶೇಖರ ರೈಗಳ ಕಲ್ಪನೆಗೆ ಇತರ ಶಿಕ್ಷಕಿಯರು ಸಹಕರಿಸಿದ್ದರು.

17 August 2010

ಕೀರ್ತನಾ ತರಗತಿ ಆರಂಭ

“ದಾಸವಾಣಿಯನ್ನು ಕೇಳುವುದು ಇಂದಿನ ಯಾಂತ್ರಿಕ ಜೀವನಕ್ಕೆ ಜೀವ ಸೆಲೆಯಾಗಿದೆ. ದಾಸರ ಜನಜಾಗೃತಿ ಕಾರ್ಯವನ್ನು ಸ್ಪಷ್ಟಪಡಿಸುವ ದಾಸವಾಣಿ ಮನೆಮನಗಳ ಆಸ್ತಿಯಾಗಬೇಕು. ಅಂತಹ ದಾರಿ ತೋರುವ ಈ ಕೀರ್ತನಾ ತರಗತಿ ಯಶಸ್ವಿಯಾಗಲಿ" ಎಂದು ಖ್ಯಾತ ಗಾಯಕ ರಾಮಕೃಷ್ಣ ಕಾಟುಕುಕ್ಕೆ ಅಭಿಪ್ರಾಯಪಟ್ಟರು. ಅವರು ನಮ್ಮ ಶಾಲಾ ಆರ್ಟ್ಸ್ ಕ್ಲಬ್ ಆಶ್ರಯದಲ್ಲಿ ನಡೆಯಲಿರುವ ದಾಸವಾಣಿ ಕೀರ್ತನಾ ತರಗತಿಗಳನ್ನು ೧೩.೦೮.೨೦೧೦ ಶುಕ್ರವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಎಂ.ವಿ.ಭಟ್ ಮಧುರಂಗಾನ ಶುಭ ಹಾರೈಸಿದರು. ಚಿತ್ರಕಲಾ ಅಧ್ಯಾಪಕ ಕೋರಿಕ್ಕಾರು ಗೋವಿಂದ ಶರ್ಮ ಸ್ವಾಗತಿಸಿ ಶಿಕ್ಷಕಿ ವಾಣಿ.ಪಿ.ಎಸ್ ವಂದಿಸಿದರು. ವಿದ್ಯಾರ್ಥಿನಿ ಶಾಂತಿ.ಕೆ ಕಾರ್ಯಕ್ರಮ ನಿರೂಪಿಸಿದರು.

16 August 2010

ಬಾಂಗ್ಲಾ ವಿಭಜನೆಯ ಪ್ರಾತ್ಯಕ್ಷಿಕೆ

“ಆಧುನಿಕತೆಯ ಭರದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ, ಕೊರಗುತ್ತಿರುವ ಕೃಷಿ ದೇಶದ ಭವಿಷ್ಯಕ್ಕೆ ಮಾರಕವಾಗಿದೆ. ಭಾರತದ ಸ್ವಾತಂತ್ರ್ಯದ ಹಿಂದೆ ಹಲವು ಮಂದಿ ಧೀರ ಹೋರಾಟಗಾರರ ತ್ಯಾಗ, ಬಲಿದಾನಗಳಿವೆ. ಈ ದಿನವನ್ನು ಆಚರಿಸುವ ಸಂದರ್ಭದಲ್ಲಿ ನಾವು ಅವರನ್ನು ಸ್ಮರಿಸಬೇಕು, ಗೌರವಿಸಬೇಕು" ಎಂದು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ನಟರಾಜ ರಾವ್ ಅಭಿಪ್ರಾಯಪಟ್ಟರು. ಅವರು ನಿನ್ನೆ ಜರಗಿದ ಸ್ವಾಂತ್ರ್ಯೋತ್ಸವ ಮತ್ತು ಬಾಂಗ್ಲಾ ವಿಭಜನೆಯ ಪ್ರಾತ್ಯಕ್ಷಿಕೆಯ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಎಂ.ಅಬ್ಬಾಸ್, ಶಾಲಾ ಹಿರಿಯ ಅಧ್ಯಾಪಕ ಕೆ. ನಾರಾಯಣ ಭಟ್ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ದಿನ ಸಂದೇಶವನ್ನು ನೀಡಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಧನ್ಯವಾದ ಸಮರ್ಪಿಸಿದರು. ಚಿತ್ರಕಲಾ ಅಧ್ಯಾಪಕ ಗೋವಿಂದ ಶರ್ಮಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ರೂಪಕ, ಸಮೂಹಗಾನ, ದೇಶಭಕ್ತಿಗೀತೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

10 August 2010

ಸ್ವಾತಂತ್ರ್ಯೋತ್ಸವ ಶುಭಾಶಯಗಳು...

ಶಾಲಾ ಸಮಾಜ ವಿಜ್ಞಾನ ಕ್ಲಬ್ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿಯಾಗಿ ಇಂದು ಹೂ ರಂಗವಲ್ಲಿಯ ಮೂಲಕ ಭಾರತದ ಭೂಪಟವನ್ನು ಬಿಡಿಸುವ ಸ್ಪರ್ಧೆ ಜರಗಿತು. ಹತ್ತು ಬಿ ತರಗತಿಯ ಮಾನಸ ಪಿ.ಎಸ್, ಅಪರ್ಣ.ಟಿ, ಶರ್ಮಿಳಾ. ಕೆ.ಎಸ್, ವಿದ್ಯಾ ಕೆ.ಎಂ, ಅಶ್ವತಿ.ಡಿ, ಕೃತಿ ಪಿ.ಕೆ ಮತ್ತು ಸುಷ್ಮಿತಾ ಬಿ. ಇವರ ತಂಡ ಪ್ರಥಮ ಪ್ರಶಸ್ತಿ ಪಡೆಯಿತು.

ರಕ್ಷಕ ಶಿಕ್ಷಕ ಸಂಗಮ

“ಶಿಕ್ಷಣ ರಂಗದಲ್ಲಿ ಶರವೇಗದ ಬದಲಾವಣೆಗಳು ಬರುತ್ತಿವೆ. ಆಧುನಿಕತೆಯ ಗಾಳಿ ಶಿಕ್ಷಣ ಪದ್ಧತಿಯ ಬದಲಾವಣೆಗೆ ಕಾರಣವಾಗಿದೆ. ಈ ಬದಲಾವಣೆಗಳ ಕುರಿತಾಗಿ ವಿದ್ಯಾರ್ಥಿಗಳ ಹೆತ್ತವರಿಗೆ ಮಾಹಿತಿ ಇರಬೇಕಾದುದು ಅವಶ್ಯವಾಗಿದೆ. ಈ ಒಂದು ದಿನದ ಶಿಬಿರದ ಮೂಲಕ ಅಗತ್ಯ ಮಾಹಿತಿಗಳನ್ನು ಹೆತ್ತವರು ತಿಳಿದುಕೊಳ್ಳುವಂತಾಗಲಿ" ಎಂದು ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಎಂ.ಅಬ್ಬಾಸ್ ಹೇಳಿದರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ ರಕ್ಷಕ ಶಿಕ್ಷಕ ಸಂಗಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಗೀತಾ ಮೊಳೆಯಾರು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಹಿರಿಯ ಅಧ್ಯಾಪಕ ಕೆ.ನಾರಾಯಣ ಭಟ್ ಶುಭಾಶಂಸನೆಗೈದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಸ್ವಾಗತಿಸಿದರು. ಶಾರೀರಿಕ ಶಿಕ್ಷಣ ಅಧ್ಯಾಪಕ ಎಂ.ಸೂರ್ಯನಾರಾಯಣ ವಂದಿಸಿದರು. ಅಧ್ಯಾಪಕ ಎಚ್.ಶಿವಕುಮಾರ ಕಾರ್ಯಕ್ರಮ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಕೆ.ಸುಬ್ರಹ್ಮಣ್ಯ ಭಟ್, ಪ್ರದೀಪ್, ಎ.ಭುವನೇಶ್ವರಿ ಉಪನ್ಯಾಸ ನೀಡಿದರು.

06 August 2010

ಶಾಲಾ ಚುನಾವಣೆ

ನಮ್ಮ ಶಾಲಾ ವಿದ್ಯಾರ್ಥಿ ಮುಖಂಡ, ವಿದ್ಯಾರ್ಥಿ ಉಪಮುಖಂಡ ಹಾಗೂ ಗಾಯತ್ರಿ ಭಿತ್ತಿಪತ್ರಿಕೆಯ ಸಂಪಾದಕ ಸ್ಥಾನಕ್ಕೆ ಮುಕ್ತ ಚುನಾವಣೆ ಇಂದು ಜರಗಿತು. ಶಾಲಾ ವಿದ್ಯಾರ್ಥಿ ಮುಖಂಡನಾಗಿ ೧೦ಬಿ ಯ ಮಿಥುನ್ ಪಿ.ಎಸ್, ಉಪಮುಖಂಡನಾಗಿ ೯ ಬಿ ಯ ನಂದನ.ಎ ಹಾಗೂ ಗಾಯತ್ರಿ ಭಿತ್ತಿ ಪತ್ರಿಕೆ ಸಂಪಾದಕನಾಗಿ ೧೦ ಡಿ ಯ ಯಜ್ಞೇಶ್ ಶೆಟ್ಟಿ.ಕೆ ಆಯ್ಕೆಯಾದರು.

04 August 2010

ಆರ್ಟ್ಸ್ ಕ್ಲಬ್ ಉದ್ಘಾಟನೆ

“ಕಲಾಭಿರುಚಿಯನ್ನು ಬೆಳೆಸಿಕೊಳ್ಳದ ಮನಸ್ಸಿನಲ್ಲಿ ವಿಕೃತ ಚಿಂತನೆಗಳು ಹುಟ್ಟಿಕೊಳ್ಳುತ್ತವೆ. ಇಂದಿನ ಯುವಜನಾಂಗದಲ್ಲಿ ಕಲೆಯ ಕಡೆಗಿನ ಆಸಕ್ತಿ ಕಡಿಮೆಯಾಗಿರುವುದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿದೆ. ಸಂಗೀತ,ಚಿತ್ರಕಲೆಗಳ ಕಡೆಗೆ ಆಸಕ್ತಿ ಬೆಳೆದಾಗ ಮನಸ್ಸು ಹಗುರವಾಗುತ್ತದೆ, ಒತ್ತಡ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಕಲಾ ಸಂಘದ ಪ್ರಸಕ್ತಿ ಅಗತ್ಯವಾಗಿದೆ" ಎಂದು ನಿವೃತ್ತ ಚಿತ್ರಕಲಾ ಶಿಕ್ಷಕ, ಸಾಹಿತಿ ಬಾಲ ಮಧುರಕಾನನ ಅಭಿಪ್ರಾಯಪಟ್ಟರು. ಅವರು ೦೩.೦೮.೨೦೧೦ ಮಂಗಳವಾರ ನಮ್ಮ ಆರ್ಟ್ಸ್ ಕ್ಲಬ್ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಹಿಂದೀ ಸಾಹಿತ್ಯ ಸಂಘದ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿದರು. ಶಾಲಾ ಹಿರಿಯ ಶಿಕ್ಷಕ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಚಿತ್ರಕಲಾ ಅಧ್ಯಾಪಕ ಗೋವಿಂದ ಶರ್ಮ ಕೋರಿಕ್ಕಾರು ಪ್ರಾಸ್ತಾವಿಕ ಭಾಷಣ ಮಾಡಿದರು. ವಿದ್ಯಾರ್ಥಿಗಳಾದ ಕ್ಷಮಾದೇವಿ ಸ್ವಾಗತಿಸಿ ಗಿರಿಶಂಕರ.ಕೆ ವಂದಿಸಿದರು. ಶಾಂತಿ.ಕೆ ಕಾರ್ಯಕ್ರಮ ನಿರ್ವಹಿಸಿದರು.

01 August 2010

ಶಾಲಾ ವಿದ್ಯಾರ್ಥಿಗಳಿಂದ ಸಿಪಿಸಿಆರ್‌ಐ ಸಂದರ್ಶನ

















ಏಳನೇ ತರಗತಿ ವಿದ್ಯಾರ್ಥಿಗಳು ೩೧.೦೭.೨೦೧೦ ಶನಿವಾರ ಕಾಸರಗೋಡು ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರಕ್ಕೆ ಶೈಕ್ಷಣಿಕ ಪ್ರವಾಸ ನಡೆಸಿ ವಿವಿಧ ತೋಟಗಾರಿಕಾ ಬೆಳೆಗಳ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಅಧಿಕಾರಿ ಕೆ.ಮಣಿಕಂಠನ್ ಕಸಿ ಕಟ್ಟುವ ಬಡ್ಡಿಂಗ್, ಗ್ರಾಫ್ಟಿಂಗ್, ಲೇಯರಿಂಗ್ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ, ಅಧ್ಯಾಪಕರಾದ ಎಚ್.ಶಿವಕುಮಾರ, ಇ.ವೇಣುಗೋಪಾಲಕೃಷ್ಣ, ತಲೆಂಗಳ ಕೃಷ್ಣಪ್ರಸಾದ, ರಾಜು ಸ್ಟೀವನ್ ಮತ್ತು ವನಿತಾ ನೇತೃತ್ವ ವಹಿಸಿದ್ದರು.