Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

23 December 2013

ಯಶಸ್ವಿಯಾಗಿ ಮೂಡಿ ಬಂದ ಶತಮಾನೋತ್ಸವ



‘ಮಹಾಜನ’ರ ಸಹಕಾರದಿಂದ ಆಕರ್ಷಣೀಯವಾಗಿ, ಜನಸಾಗರ ಸೇರಿದ ಅಚ್ಚುಕಟ್ಟು ಕಾರ್ಯಕ್ರಮ ಎಂಬ ನೆಲೆಯಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು, ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಶತಮಾನೋತ್ಸವ ಕಾರ್ಯಕ್ರಮವು ನಾಡಿನ ಜನರು ಚಿರಕಾಲ ನೆನಪಿಡುವಂತಹ ಅವಿಸ್ಮರಣೀಯ ಕಾರ್ಯಕ್ರಮವಾಗಿ ಮೂಡಿಬಂತು. 1974ರಲ್ಲಿ ಶಾಲೆಯ ವಜ್ರ ಮಹೋತ್ಸವ ಕಾರ್ಯಕ್ರಮದ ನಂತರ ಇಷ್ಟು ವ್ಯವಸ್ಥಿತವಾದ ಬೃಹತ್ ಕಾರ್ಯಕ್ರಮ ಇದೇ ಪ್ರಥಮ ಬಾರಿಯಾಗಿ ನಡೆಯಿತು ಎಂದು ಆ ಕಾಲದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯರು ನೆನಪಿಸಿಕೊಳ್ಳುವಂತಾಯಿತು.
ಸಮಾರಂಭದ ವೇದಿಕೆಗೆ ಆಹ್ವಾನಿಸಿದ್ದ ಹೆಚ್ಚಿನ ಎಲ್ಲ ಅತಿಥಿಗಳೂ ಕ್ಲಪ್ತ ಸಮಯಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮದ ಗೌರವವನ್ನು ಉಳಿಸಿಕೊಂಡದ್ದು ನಾಡಿನ ಹೆಮ್ಮೆಯಾಗಿ ಮೂಡಿಬಂತು.ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಸುಮಾರು ಹತ್ತುಸಾವಿರಕ್ಕೂ ಹೆಚ್ಚು ಮಂದಿ ಭೋಜನ ಸ್ವೀಕರಿಸಿದ್ದಾರೆ. ಕಾವ್ಯಾಮಾಧವನ್ ಉಪಸ್ಥಿತರಿದ್ದ ಶತಮಾನೋತ್ಸವ ಸಮಾರೋಪ ಸಮಾರಂಭಕ್ಕೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದರೂ ಯಾವುದೇ ನೂಕುನುಗ್ಗಲು, ಅಹಿತಕರ ಘಟನೆಗಳು ನಡೆಯಲಿಲ್ಲ.
ಸಾಂಸ್ಕೃತಿಕ ಕಾರ್ಯಕ್ರಮಗಳು ಶಾಲಾ ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳಿಗೆ ಮೀಸಲಾಗಿದ್ದರೂ ಉತ್ತಮ ಪ್ರತಿಭಾನ್ವಿತ ಕಲಾವಿದರಿಗೆ ಸಮಾರಂಭದ ವೇದಿಕೆಯಲ್ಲಿ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲು ಅವಕಾಶ ಸಿಕ್ಕಿದುದು ಹೆಮ್ಮೆ ಎನಿಸಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿದ್ದ ವೈವಿಧ್ಯತೆ ಜನಾಕರ್ಷಣೆಗೆ ಕಾರಣವಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪವಾಗಿ ಅಧ್ಯಾಪಕರು ಹಾಗೂ ಹಳೆ ವಿದ್ಯಾರ್ಥಿಗಳ ಕೂಡುವಿಕೆಯಲ್ಲಿ ನಡೆದ ಯಕ್ಷಗಾನ ಬಯಲಾಟ ‘ಕಾರ್ತವೀರ್ಯಾರ್ಜುನ ಕಾಳಗ’ ಮತ್ತು ‘ಶ್ರೀ ಏಕಾದಶೀ ದೇವಿ ಮಹಾತ್ಮೆ’ ಗಳು ಚೆನ್ನಾಗಿ ಮೂಡಿಬಂದವು.
“ನಾಡಿನ ಎಲ್ಲ ಮಹಾಜನರ, ವಿದ್ಯಾಭಿಮಾನಿಗಳ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಬಂತು. ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದು ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ತಿಳಿಸಿದ್ದಾರೆ.

1 comment: