Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

26 August 2011

ರಾಜ್ಯ ಪುರಸ್ಕಾರ ಸ್ಕೌಟ್

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ನೀಡುವ ರಾಜ್ಯ ಪುರಸ್ಕಾರ ಸ್ಕೌಟ್ ಪ್ರಶಸ್ತಿಗೆ ಭಾಜನರಾದ ನಮ್ಮ ಶಾಲಾ ಸ್ಕೌಟ್‌ಗಳು...

21 August 2011

ಶ್ರೀಕೃಷ್ಣ ಜಯಂತಿ





ವಿದ್ಯೆ, ತಪಸ್ಸು, ಧ್ಯಾನ, ಜ್ಞಾನ, ಶೀಲ, ಗುಣ, ಧರ್ಮ ಈ ಏಳು ಗುಣಗಳು ಇಲ್ಲದಿರುವವರು ಭೂಮಿಗೆ ಭಾರವಾಗಿರುವ ಮನುಷ್ಯರೂಪದ ಮೃಗಗಳು. ಉತ್ತಮ ಮನಸ್ಸು ನಮ್ಮ ದೇಹವನ್ನು ಶ್ರೀಮಂತವಾಗಿಸುತ್ತವೆ. ಶುದ್ಧ ಮನಸ್ಸು ನಮ್ಮ ಆತ್ಮೀಯ ಗೆಳೆಯ. ಮನಸ್ಸನ್ನು ತಿದ್ದುವ ಕಾರ್ಯ ನಿತ್ಯ ನಿರಂತರವಾಗಬೇಕು. ಹಾಗಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ, ಜನ್ಮ ಸಾರ್ಥಕವಾಗಲು ಸಾಧ್ಯ" ಎಂದು ಪೆರ್ಲ ಶ್ರೀಸತ್ಯನಾರಾಯಣ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಆರ್. ನರಸಿಂಹ ಭಟ್ ಹೇಳಿದರು. ಅವರು ಇಂದು ಪೆರಡಾಲ ಮಹಾಜನ ವಿದ್ಯಾಭಿವರ್ಧಕ ಸಂಘದ ‘ವಿದ್ಯೋದಯ ಸಭಾ’ ಆಶ್ರಯದಲ್ಲಿ ನಮ್ಮ ಶಾಲೆಗಳಲ್ಲಿ ಜರಗಿದ ‘ಶ್ರೀಕೃಷ್ಣ ಜಯಂತಿ’ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.


ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಾಲಿಂಗ ಪಾಟಾಳಿ ಮುಖ್ಯ ಅತಿಥಿಗಳಾಗಿದ್ದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ವಿದ್ಯಾರ್ಥಿ ನಾಯಕಿ ಶಾಂತಿ.ಕೆ ವರದಿ ವಾಚಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜಯದೇವ ಖಂಡಿಗೆ ಸ್ವಾಗತಿಸಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಂದಿಸಿದರು. ಕಾರ್ಯಕ್ರಮದ ಸಂಚಾಲಕ, ಶಿಕ್ಷಕ ಚಂದ್ರಶೇಖರ ರೈ ಕಾರ್ಯಕ್ರಮ ನಿರೂಪಿಸಿದರು.


ಮನರಂಜನಾ ಕಾರ್ಯಕ್ರಮದ ಅಂಗವಾಗಿ ಕೀರ್ತನ ಪ್ರವೀಣ ಶ್ರೀ ಬೆಳ್ಳೂರು ಕಮಲ ತನಯ ಅವರಿಂದ ‘ಭಕ್ತ ಕನಕದಾಸ’ ಹರಿಕಥೆ ಕಾರ್ಯಕ್ರಮ ಜರಗಿತು.


17 August 2011

ನೀರ್ಚಾಲು ಮದಕಕ್ಕೆ ಪ್ರಯಾಣ

ಮಳೆಗಾಲದಲ್ಲಿ ನೀರು ತುಂಬಿ ಮೈದಳೆಯುವ ಮದಕ ನೋಡಲು ವಿದ್ಯಾರ್ಥಿಗಳಿಗೆ ಬಲು ಖುಷಿ. ಅವರಿಗೆ ನೀರೆಚ್ಚರದ ಪಾಠ ಹೇಳಲು ನಮ್ಮ ಇಂದಿನ ಪಯಣ ನೀರ್ಚಾಲಿನ ಅಂಗನವಾಡಿ ಪರಿಸರದ ಮದಕಕ್ಕೆ...

16 August 2011

ಹೂ ರಂಗವಲ್ಲಿ...

ಶಾಲಾ ವಿಜ್ಞಾನ ಕ್ಲಬ್ ಆಶ್ರಯದಲ್ಲಿ ಸ್ವಾತಂತ್ರೋತ್ಸವದ ಆ೦ಗವಾಗಿ ನಡೆದ ಹೂವಿನಲ್ಲಿ ಭಾರತದ ಭೂಪಟವನ್ನು ಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಡೆದ ತ೦ಡ .
ಶಾಲಾ ವಿಜ್ಞಾನ ಕ್ಲಬ್ ಆಶ್ರಯದಲ್ಲಿ ಸ್ವಾತಂತ್ರೋತ್ಸವದ ಆ೦ಗವಾಗಿ ನಡೆದ ಹೂವಿನಲ್ಲಿ ಕೇರಳದ ಭೂಪಟವನ್ನು ಬಿಡಿಸುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ತಂಡ.

15 August 2011

ಸ್ವಾತಂತ್ರ್ಯ ಯಾತ್ರೆ

“ಹಿರಿಯರ ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯವನ್ನು ನಾವು ಸಂರಕ್ಷಿಸಬೇಕಾಗಿದೆ. ಇಂದು ಭಾರತ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರು ನಿಸ್ವಾರ್ಥವಾಗಿ ದೇಶಕ್ಕಾಗಿ ದುಡಿದರೆ ರಾಜಕಾರಣಿಗಳು ಸ್ವಂತ ಸಂಪತ್ತಿಗಾಗಿ ಹವಣಿಸುತ್ತಿದ್ದಾರೆ. ನಮ್ಮ ಸಂವಿಧಾನ ಭಾರತದ ಪ್ರಜಾಪ್ರಭುತ್ವಕ್ಕೆ ಆಧಾರ ಸ್ತಂಭವಾಗಿದೆ. ಆಡಳಿತಕ್ಕೆ ಚೌಕಟ್ಟು ನೀಡಿದರೂ ಇಂದು ನಡೆಯುತ್ತಿರುವ ಸಂವಿಧಾನಾತೀತವಾದ ಚಟುವಟಿಕೆಗಳು ದೇಶಕ್ಕೆ ಸವಾಲಾಗಿ ಪರಿಣಮಿಸುತ್ತಿದೆ. ಸ್ವಾತಂತ್ರ್ಯದ ಸಂದೇಶವನ್ನು ಉಳಿಸಿ ದೇಶದ ಹಿತಕ್ಕಾಗಿ ನಾವು ಶ್ರಮಿಸಬೇಕಾಗಿದೆ" ಎಂದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಚಂದ್ರಶೇಖರ ರೈ ಹೇಳಿದರು. ಅವರು ಇಂದು ನಮ್ಮ ಶಾಲೆಗಳಲ್ಲಿ ಜರಗಿದ ಸ್ವಾತಂತ್ರ್ಯ ಯಾತ್ರೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಅಧ್ಯಕ್ಷತೆ ವಹಿಸಿದರು. ಕಿರಿಯ ಪ್ರಾಥಮಿಕ ಶಾಲಾ ವಿಭಾಗದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸೀತಾರಾಮ ಆಚಾರ್ಯ ಶುಭಾಶಯಗಳನ್ನು ಹೇಳಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕಿ ಶಾಂತಿ.ಕೆ ಸ್ವಾಗತಿಸಿದರು. ಶಿಕ್ಷಕ ಎಂ.ಸೂರ್ಯನಾರಾಯಣ ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ರೂಪಿಸಿದ ಸ್ವಾತಂತ್ರ್ಯ ವಿಶೇಷಾಂಕವನ್ನು ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿಗಳಿಂದ ನೀರ್ಚಾಲಿನಲ್ಲಿ ಸ್ವಾತಂತ್ರ್ಯ ಮೆರವಣಿಗೆ ನಡೆಯಿತು.

11 August 2011

ಚಿನ್ನದ ಕುಸುರಿ ಕಲೆಯ ಕಡೆಗೆ...

ವಿದ್ಯಾರ್ಥಿಗಳಿಗೆ ಸಂದರ್ಶನದಲ್ಲಿ ತೀವ್ರ ಆಸಕ್ತಿ. ಪಠ್ಯಪುಸ್ತಕದಲ್ಲಿ ಕಲಿತ ಅಕ್ಕಸಾಲಿಗರನ್ನು ಪರಿಚಯ ಮಾಡಿಕೊಳ್ಳುವ ನಿಟ್ಟಿನಲ್ಲಿ ಇಂದು ನಮ್ಮ ಸಂದರ್ಶನ ನೀರ್ಚಾಲಿನ ಚಿನ್ನದ ಕೆಲಸಗಾರ ಭಾಸ್ಕರ ಆಚಾರ್ಯ ಅವರ ಬಳಿಗೆ. ವಿದ್ಯಾರ್ಥಿಗಳಿಗೆ ಬಂಗಾರದ ಧಾರಣೆ ಮುಗಿಲು ಮುಟ್ಟಿದ ಈ ದಿನಗಳಲ್ಲಿ ಇದು ಹೊಸ ಅನುಭವ...

05 August 2011

ಇಂದು ಶಾಲಾ ಚುನಾವಣೆ...


ನಮ್ಮ ಶಾಲಾ ವಿದ್ಯಾರ್ಥಿ ನಾಯಕನ ಆಯ್ಕೆಗಾಗಿ ಇಂದು ಚುನಾವಣೆ ನಡೆಯಿತು. ಎಲ್ಲಾ ತರಗತಿಯ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ಬಂದು ತಮ್ಮ ಅಮೂಲ್ಯ ಮತಗಳನ್ನು ಚಲಾಯಿಸಿದರು. ಶಾಲಾ ಉಪನಾಯಕನ ಸ್ಥಾನಕ್ಕೆ ೯ಬಿ ತರಗತಿಯ ಸುಚಿತ್ರಾ ಅವಿರೋಧ ಆಯ್ಕೆಯಾಗಿದ್ದಳು. ಶಾಲಾ ವಿದ್ಯಾರ್ಥಿ ನಾಯಕ ಮತ್ತು ‘ಗಾಯತ್ರಿ’ ಭಿತ್ತಿಪತ್ರಿಕೆಯ ಸಂಪಾದಕ ಸ್ಥಾನಕ್ಕೆ ಸ್ಪರ್ಧೆ ನಡೆದಿತ್ತು. ಈಗ ಮತ ಎಣಿಕೆ ಪೂರ್ತಿಗೊಂಡಿದ್ದು ಶಾಲಾ ವಿದ್ಯಾರ್ಥಿ ನಾಯಕಿಯಾಗಿ ೧೦ಬಿ ತರಗತಿಯ ಶಾಂತಿ.ಕೆ ಮತ್ತು ‘ಗಾಯತ್ರಿ’ ಭಿತ್ತಿ ಪತ್ರಿಕೆಯ ಸಂಪಾದಕನಾಗಿ ೧೦ಎ ತರಗತಿಯ ಆಶಿಕ್. ಜಿ ಆಯ್ಕೆಯಾಗಿದ್ದಾರೆ. ಶುಭಾಶಯಗಳು...

29 July 2011

ಕಡೆಯುವ ಕಲ್ಲು ತಯಾರಿ ಹೇಗೆ..?

ಈ ವಾರ ನಮ್ಮ ಪ್ರಯಾಣ ಕಡೆಯುವ ಕಲ್ಲು ತಯಾರಿಕಾ ಕೇಂದ್ರಕ್ಕೆ. ಪಠ್ಯದ ವಿಚಾರಗಳನ್ನು ಕಣ್ಣಾರೆ ಕಂಡು ಪರಾಂಬರಿಸುವ ನಿಟ್ಟಿನಲ್ಲಿ ಇಂದು ನೀರ್ಚಾಲಿನ ಮೇಲಿನ ಪೇಟೆಯ ಕಡೆಯುವ ಕಲ್ಲು ತಯಾರಿಕಾ ಕೇಂದ್ರಕ್ಕೆ ನಮ್ಮ ಸಂದರ್ಶನದ ಛಾಯಾಚಿತ್ರ ನಿಮ್ಮ ಮುಂದೆ...

22 July 2011

‘ಚೈತನ್ಯ ಕ್ಲಬ್’ ಉದ್ಘಾಟನೆ

"ಜಗತ್ತು ಆಧುನಿಕತೆಯ ಕಡೆಗೆ ಸಾಗುತ್ತಿರುವಂತೆ ವಿದ್ಯುತ್ತಿನ ಉಪಯೋಗ ವಿಪರೀತವಾಗಿ ಹೆಚ್ಚುತ್ತಿದೆ. ಒಂದು ಯೂನಿಟ್ ವಿದ್ಯುತ್ತಿನ ಉಳಿತಾಯ ಮೂರು ಯೂನಿಟ್ ವಿದ್ಯುತ್ ಉತ್ಪಾದನೆಗೆ ಸಮ ಎಂಬ ಸ್ಥಿತಿಗೆ ನಾವು ತಲಪಿದ್ದೇವೆ. ಹಾಗಾಗಿ ಮನೆಮನಗಳಲ್ಲಿ ಚೈತನ್ಯದ ಉಳಿತಾಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೇರಳ ವಿದ್ಯುತ್ ಇಲಾಖೆಯು ವಿದ್ಯಾಭ್ಯಾಸ ಇಲಾಖೆಯ ಸಹಯೋಗದಲ್ಲಿ ವಿದ್ಯಾರ್ಥಿಗಳಲ್ಲಿ ಚೈತನ್ಯದ ಸಂರಕ್ಷಣೆಯ ಕಾರ್ಯಕ್ರಮವನ್ನು ಆಯೋಜಿಸಿದೆ. ವಿದ್ಯುತ್ತಿನ ದುರ್ಬಳಕೆಯನ್ನು ತಡೆಗಟ್ಟಿ ನಾಳೆಗಾಗಿ ಒಂದಿಷ್ಟು ಚೈತನ್ಯ ಉಳಿಸೋಣ" ಎಂದು ಕೇರಳ ರಾಜ್ಯ ವಿದ್ಯುತ್ ಮಂಡಳಿಯ ಬದಿಯಡ್ಕ ವಿಭಾಗದ ಸಹಾಯಕ ಇಂಜಿನಿಯರ್ ರಾಜಗೋಪಾಲ.ಕೆ.ಬಿ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಕೇರಳ ಸರಕಾರದ ‘ನಾಳೆಗಾಗಿ ಚೈತನ್ಯ’ ಯೋಜನೆಯ ಅಂಗವಾಗಿ ಆರಂಭವಾದ ‘ಚೈತನ್ಯ ಕ್ಲಬ್’ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.


ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅಧ್ಯಾಪಕರಾದ ಎಸ್.ವಿ.ಭಟ್ ಮತ್ತು ಶಂಕರನಾರಾಯಣ ಶರ್ಮ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶಾಂತಿ.ಕೆ ಸ್ವಾಗತಿಸಿ, ಶಶಾಂಕ ಶರ್ಮ.ಎಸ್ ವಂದಿಸಿದರು. ವರ್ಷಾ.ಕೆ ಕಾರ್ಯಕ್ರಮ ನಿರೂಪಿಸಿದರು. ವಿದ್ಯುತ್ ಉಳಿತಾಯದ ಮಹತ್ವವನ್ನು ವಿವರಿಸುವ ಸ್ಲೈಡ್ ಪ್ರದರ್ಶನ ನಡೆಸಲಾಯಿತು. ವಿದ್ಯುತ್ ಉತ್ಪಾದನೆ ಮತ್ತು ಪ್ರೇಷಣೆಯ ಹಂತಗಳ ಬಗ್ಗೆ ವಿದ್ಯಾರ್ಥಿಗಳು ತಮ್ಮ ಸಂಶಯಗಳನ್ನು ಈ ಸಂದರ್ಭಲ್ಲಿ ಬಗೆಹರಿಸಿಕೊಂಡರು.

19 July 2011

ಮತ್ತೆ ಸಿ ಪಿ ಸಿ ಆರ್ ಐ ಪ್ರವಾಸ...

ನಮ್ಮ ವಾರ್ಷಿಕ ಚಟುವಟಿಕೆಗಳ ಭಾಗವಾಗಿ ಕಾಸರಗೋಡಿನಲ್ಲಿರುವ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರಕ್ಕೆ ಪ್ರವಾಸ ಹೋಗಿದ್ದೆವು ಮೊನ್ನೆ ಶನಿವಾರ ಜುಲೈ ೧೬ಕ್ಕೆ. ಬಡ್ಡಿಂಗ್, ಗ್ರಾಫ್ಟಿಂಗ್, ಎರೆಹುಳ ಗೊಬ್ಬರ ತಯಾರಿ ಇತ್ಯಾದಿಗಳನ್ನು ನೋಡಿ ಹೊಸ ಮಾಹಿತಿ ತಿಳಿದು ಬಂದಿದ್ದೇವೆ. ಇದು ನಮ್ಮ ವಾರ್ಷಿಕ ಚಟುವಟಿಕೆಗಳಾದರೂ ವಿದ್ಯಾರ್ಥಿಗಳಿಗೆ ಹೊಸ ಅನುಭವ ಎಂಬುದರಲ್ಲಿ ಸಂಶಯವಿಲ್ಲ.

08 July 2011

ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ವಾರ್ಷಿಕ ಉದ್ಘಾಟನೆ

ನಮ್ಮ ಶಾಲಾ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ವಾರ್ಷಿಕ ಉದ್ಘಾಟನೆಯನ್ನು ಶಾಲಾ ಸಂಸ್ಕೃತ ಅಧ್ಯಾಪಕರಾದ ಶ್ರೀಯುತ ಎಸ್.ವಿ.ಭಟ್ ಇಂದು ಮಧ್ಯಾಹ್ನ ನೆರವೇರಿಸಿದರು. ಈ ಸಂದರ್ಭದಲ್ಲಿ ಸಭಾಧ್ಯಕ್ಷತೆ ವಹಿಸಿದ ದೈಹಿಕ ಶಿಕ್ಷಕ ಶ್ರೀ ಎಂ.ಸೂರ್ಯನಾರಾಯಣ ವಿದ್ಯಾರ್ಥಿಗಳ ಹಸ್ತಪ್ರತಿ ‘ಗಾಯತ್ರಿ’ ಯನ್ನು ಬಿಡುಗಡೆಗೊಳಿಸಿದರು. ಕನ್ನಡ ಶಿಕ್ಷಕಿ ಶ್ರೀಮತಿ ವಾಣಿ. ಪಿ.ಎಸ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಕಾರ್ಯಕ್ರಮದ ಅಂಗವಾಗಿ ಮನರಂಜನಾ ಕಾರ್ಯಕ್ರಮಗಳೂ ಜರಗಿದವು.


ರಕ್ಷಕ ಶಿಕ್ಷಕ ಸಂಘ

ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ೦೬.೦೭.೨೦೧೧ ಬುಧವಾರ ನಮ್ಮ ಶಾಲಾ ಸಭಾಂಗಣದಲ್ಲಿ ಜರಗಿತು. ನೂತನ ಅಧ್ಯಕ್ಷರಾಗಿ ಮಹಾಲಿಂಗ ಪಾಟಾಳಿಯವರನ್ನು ಆಯ್ಕೆ ಮಾಡಲಾಯಿತು. ೨೦೧೦-೧೧ ನೇ ಸಾಲಿನಲ್ಲಿ ಅಧ್ಯಕ್ಷರಾಗಿದ್ದ ನಟರಾಜ ರಾವ್ ಅಧ್ಯಕ್ಷ ಭಾಷಣ ಮಾಡಿದರು. ಹಿರಿಯ ಅಧ್ಯಾಪಕರಾದ ಎಸ್.ವಿ.ಭಟ್ ವರದಿ ವಾಚಿಸಿದರು.

01 July 2011

ಶೇಖರಕಾನ...

ಮತ್ತೆ ಮತ್ತೆ ಶೇಖರಕಾನ ಪ್ರವಾಸದ ಫೋಟೋಗಳನ್ನು ಪ್ರದರ್ಶಿಸಲು ನಮಗೆ ಸಂತಸವಾಗುತ್ತಿದೆ. ಮಳೆಗಾಲದಲ್ಲೆಲ್ಲ ನಮ್ಮನ್ನು ಆಕರ್ಷಿಸುವ ಶೇಖರಕಾನ ಜಲಪಾತಕ್ಕೆ ಈ ಬಾರಿಯೂ ಹೋಗಿ ಬಂದಿದ್ದೇವೆ. ಹೊಸ ವಿದ್ಯಾರ್ಥಿಗಳಿಗೆ ಹೊಸ ಅನುಭವವನ್ನು ಕಟ್ಟಿಕೊಟ್ಟಿದ್ದೇವೆ.

28 June 2011

ಆರ್ಟ್ಸ್ ಕ್ಲಬ್...

ನಮ್ಮ ಶಾಲಾ ಚಿತ್ರಕಲಾ ಅಧ್ಯಾಪಕರ ಆಸಕ್ತಿಯಲ್ಲಿ ಗರಿಗೆದರಿದ ಸಂಘ ಶಾಲಾ ಆರ್ಟ್ಸ್ ಕ್ಲಬ್. ವಿದ್ಯಾರ್ಥಿಗಳಿಗೂ ಈ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸುವುದು ಖುಷಿಯ ವಿಚಾರ. ಮೊನ್ನೆ ಮಾದಕ ದ್ರವ್ಯ ವಿರೋಧಿ ದಿನ ಸರಿದು ಹೋಗಿರುವುದು ನಿಮಗೆಲ್ಲ ತಿಳಿದ ವಿಚಾರ. ಆರ್ಟ್ಸ್ ಕ್ಲಬ್ ಉದ್ಘಾಟನೆಯ ಜೊತೆ ಮಾದಕ ದ್ರವ್ಯ ವಿರೋಧಿ ಪೋಸ್ಟರ್ ರಚನಾ ಸ್ಪರ್ಧೆಯೂ ಜರಗಿತು. ಆ ಸಂದರ್ಭದ ಒಂದು ಝಲಕ್ ಇಲ್ಲಿದೆ...

24 June 2011

ಮತ್ತೆ ಕಾರ್ಯನಿರತರಾಗಿದ್ದೇವೆ...







ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿವಿಧ ಕ್ಲಬ್‍ಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳ ಔಪಚಾರಿಕ ಉದ್ಘಾಟನಾ ಕಾರ್ಯಕ್ರಮ ಇಂದು ಮಧ್ಯಾಹ್ನ ಶಾಲೆಯಲ್ಲಿ ಜರಗಿತು. ಹಿರಿಯ ಅಧ್ಯಾಪಕರಾದ ಕೆ.ನಾರಾಯಣ ಭಟ್ ಉದ್ಘಾಟಿಸಿದರು. ಇಂದಿನ ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ಕ್ಲಬ್ ಮತ್ತು ಗಣಿತ ಕ್ಲಬ್ ವಾರ್ಷಿಕ ಚಟುವಟಿಕೆಗಳನ್ನು ಆರಂಭಿಸಿದವು.

02 June 2011

ಶಾಲಾರಂಭ...

ರಜೆಯ ಸಂಭ್ರಮವನ್ನು ಕಳೆದು ಮತ್ತೆ ಬಂದಿದ್ದೇವೆ. ನಿನ್ನೆಯಿಂದ ಹೊಸ ಅಧ್ಯಯನ ವರ್ಷ ಆರಂಭವಾಗಿದೆ. ಎಲ್ಲರಿಗೂಶುಭಾಶಯಗಳು...

06 May 2011

ಶುಭಾಶಯಗಳು...

ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆ ಫಲಿತಾಂಶದ ವಿವರಗಳು ಬಂದಿವೆ. ನಮ್ಮ ಶಾಲೆಯ ಗಿರಿಶಂಕರ, ಮಾನಸ. ಪಿ.ಎಸ್, ಸುಶ್ಮಿತಾ ಶೆಟ್ಟಿ. ಎನ್, ಸುಶ್ಮಿತಾ. ಬಿ ಮತ್ತು ವಿದ್ಯಾ. ಕೆ.ಎಮ್ ಇವರಿಗೆ ಎಲ್ಲಾ ಪರೀಕ್ಷೆಗಳಲ್ಲೂ ಎ+ ಗ್ರೇಡ್ ಬಂದಿವೆ. ಎಲ್ಲರಿಗೂ ಶುಭಾಶಯಗಳು...

29 April 2011

ರಿಸಲ್ಟ್ ಬಂತು, 93%...

ಇತಿಹಾಸದಲ್ಲೇ ಮೊದಲ ಬಾರಿಗೆ ಮಾರ್ಚ್ ತಿಂಗಳಲ್ಲಿ ಜರಗಿದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಎಪ್ರಿಲ್ ತಿಂಗಳಲ್ಲೇ ಬಂದಿದೆ. ಕೇರಳದಾದ್ಯಂತ ೯೧.೩೩% ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ತೇರ್ಗಡೆ ಹೊಂದಿದ್ದಾರೆ. ಸುಮಾರು ಇಷ್ಟೇ ಫಲಿತಾಂಶ ಕಾಸರಗೋಡು ಜಿಲ್ಲೆಗೂ ಬಂದಿದೆ. ನಮ್ಮ ಶಾಲೆಯ ಫಲಿತಾಂಶ ೯೩.೩೩% ಎಂದು ದಾಖಲಿಸಲು ನಮಗೂ ಸಾಧ್ಯವಾಗಿದೆ. ಕಳೆದ ವರ್ಷದ ಫಲಿತಾಂಶಕ್ಕಿಂತ ಇದು ಚೂರು ಕೆಳ ಸರಿದಂತೆ ಕಂಡರೂ ನಮ್ಮ ವಿದ್ಯಾರ್ಥಿಗಳ ಪ್ರಯತ್ನ ಉತ್ತಮವಾಗಿತ್ತು ಎನ್ನಲು ಅಡ್ಡಿಯಿಲ್ಲ. ತೇರ್ಗಡೆ ಹೊಂದಿದ ಎಲ್ಲ ವಿದ್ಯಾರ್ಥಿಗಳಿಗೆ ಶುಭಾಶಯಗಳು...

31 March 2011

ಶಿಕ್ಷಕಿ ವೈ.ಪರಮೇಶ್ವರಿ ಅವರಿಗೆ ಭಾವಪೂರ್ಣ ನಿವೃತ್ತಿ...

ನಮ್ಮೊಂದಿಗೆ ಹಿರಿಯಕ್ಕನಾಗಿದ್ದು, ಮಕ್ಕಳಿಗೆಲ್ಲ ಆತ್ಮೀಯರಾಗಿದ್ದ ಕಿರಿಯ ಪ್ರಾಥಮಿಕ ಶಾಲಾ ಅಧ್ಯಾಪಕಿ ವೈ.ಪರಮೇಶ್ವರಿ ಇಂದು ತಮ್ಮ ನಿವೃತ್ತ ಜೀವನಕ್ಕೆ ಕಾಲಿರಿಸುತ್ತಿದ್ದಾರೆ. ಅವರ ಮುಂದಿನ ಜೀವನ ಸುಖ ಶಾಂತಿ, ನೆಮ್ಮದಿಗಳಿಂದ ನೆಲೆಸಿರಲಿ ಎಂದು ಹಾರೈಸುತ್ತೇವೆ.

09 March 2011

ಪರೀಕ್ಷೆ, ಪರೀಕ್ಷೆ...

ಐದರಿಂದ ಒಂಭತ್ತರ ವರೆಗಿನ ಮಕ್ಕಳಿಗೆ ಈಗ ವಾರ್ಷಿಕ ಪರೀಕ್ಷೆ ನಡೆಯುತ್ತಿದೆ. ನಾಡಿದ್ದು ಮಾರ್ಚ್ 14ರಂದು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಆರಂಭವಾಗಲಿದೆ. ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳಿಗೆ ನಮ್ಮ ಶುಭಾಶಯಗಳು.