Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

25 January 2011

ಸಹಕಲಿಕಾ ಶಿಬಿರ ಆರಂಭ


ಶಾಲೆ, ರಾತ್ರಿಯ ಪ್ರಶಾಂತ ವಾತಾವರಣದಲ್ಲಿಯೂ ಚಿಲಿಪಿಲಿಗುಟ್ಟುತ್ತಿದೆ. ಶಾಲೆಯಲ್ಲಿ ಗೂಡುಕಟ್ಟಿದ ವಿದ್ಯಾರ್ಥಿಗಳು ಶಿಬಿರಾಗ್ನಿಯ ಮಜಾ ಅನುಭವಿಸುತ್ತಿದ್ದಾರೆ. ಇಂದು ಬೆಳಗ್ಗೆ ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ಉದ್ಘಾಟಿಸಿದ ಶಿಬಿರ ಸಂಪನ್ಮೂಲ ವ್ಯಕ್ತಿಗಳಾದ ಗುರುಪ್ರಸಾದ ರೈ ಮತ್ತು ತಂಡದವರ ನೇತೃತ್ವದಲ್ಲಿ ಚೆನ್ನಾಗಿ ನಡೆಯುತ್ತಿದೆ. ನೂರೈವತ್ತಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದಾರೆ. ಖುಷಿ ಇದೆ.
ನಾಳೆ ಗಣರಾಜ್ಯೋತ್ಸವ, ಎಲ್ಲರಿಗೂ ಶುಭಾಶಯಗಳು...

24 January 2011

ನಾಳೆ ಸಹವಾಸ ಶಿಬಿರ

ಏಳನೇ ತರಗತಿ ವಿದ್ಯಾರ್ಥಿಗಳ ಸಹವಾಸ ಶಿಬಿರ ಮತ್ತು ಶಾಲಾ ಸ್ಕೌಟ್ ಗೈಡ್ ದಳಗಳ ವಾರ್ಷಿಕ ಶಿಬಿರ ನಾಳೆ ಮತ್ತು ನಾಡಿದ್ದು ನಮ್ಮ ಶಾಲೆಯಲ್ಲಿ ಜರಗಲಿದೆ. ಸುಮಾರು ನೂರೈವತ್ತಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸುವ ಈ ಶಿಬಿರವೂ ಯಶಸ್ವಿಯಾಗಲೆಂದು ಪ್ರಾರ್ಥಿಸುತ್ತೇವೆ.

19 January 2011

ನಮಸ್ಕಾರ, ನಾವು ತೃತೀಯ ವರ್ಷಕ್ಕೆ ಕಾಲಿಡುತ್ತಿದ್ದೇವೆ...

ಒಂದು, ಎರಡು... ವರ್ಷಗಳು ಕಳೆದಿವೆ. ೨೦೦೯ ಜನವರಿ ೧೯ರಂದು ಈ ಬ್ಲಾಗನ್ನು ನಿಮ್ಮೆದುರು ತೆರೆದಿಡುವಾಗ ಇಷ್ಟೆಲ್ಲ ನಿರೀಕ್ಷೆಗಳಿರಲಿಲ್ಲ. ಆದರೆ ಎರಡು ವರ್ಷಗಳಲ್ಲಿ ಈ ಬ್ಲಾಗ್ ನಮಗೆ ಸಂವಹನದ ಹೊಸ ಮಜಲುಗಳನ್ನು ತೆರೆದು ತೋರಿಸಿದೆ. ಕಾಲಉರುಳಿದೆ,ನಿನ್ನೆ ಸಂಜೆ ಶಾಲೆಯಿಂದ ಹೊರಟ ವಿದ್ಯಾರ್ಥಿಗಳು ಕೇರಳ ರಾಜ್ಯ ರಾಜಧಾನಿ ತಿರುವನಂತಪುರದಲ್ಲಿ ತಿರುಗಾಟ ನಿರತರಾಗಿದ್ದಾರೆ. ಎರಡು ವರ್ಷಗಳಲ್ಲಿ ಶಾಲೆ ಬಿಟ್ಟ ವಿದ್ಯಾರ್ಥಿಗಳನ್ನು ಮಾತ್ರವಲ್ಲ, ಶಾಲೆಯ ಇನ್ನಷ್ಟು ಪೂರ್ವ ಇದ್ಯಾರ್ಥಿಗಳನ್ನು ಹಿತೈಷಿಗಳನ್ನು ತಲಪಲು ನಮಗೆ ಸಾಧ್ಯವಾಗಿದೆ. ಹಾಗಾಗಿ ನಾವು ಅಂತರ್ಜಾಲದ ಮೂಲಕ ದೇಶ ವಿದೇಶಗಳನ್ನು ತಲಪಿದ್ದೇವೆ ಎಂಬುದನ್ನು ಧೈರ್ಯದಿಂದ ಹೇಳಿಕೊಳ್ಳುತ್ತಿದ್ದೇವೆ. ಇದಕ್ಕೆ ಈ ಕ್ಷಣದ ಮಾಹಿತಿಯ ಪ್ರಕಾರ ೧೩೦ ಮಂದಿ ಫಾಲೋವರುಗಳು ಇದ್ದಾರೆ ಎಂಬುದಕ್ಕಿಂತ ಹೆಚ್ಚಿನ ದೃಷ್ಟಾಂತ ಬೇಕೇ...

ನಿಮಗೆಲ್ಲ ಈ ಸಂದರ್ಭದಲ್ಲಿ ನಮ್ಮ ಭಾವಪೂರ್ಣ ನಮನಗಳು. ನಮ್ಮನ್ನು ಈ ಹುಟ್ಟುಹಬ್ಬ ಸಂಭ್ರಮದ ತನಕ ಬೆಳೆಸಿದ ನಿಮಗೆ ನಾವು ಆಭಾರಿಗಳು. ಪ್ರೀತಿ ಇರಲಿ...

18 January 2011

ಶಾಲಾ ಪ್ರವಾಸ - ತಿರುವನಂತಪುರಕ್ಕೆ...

ಅಧ್ಯಯನ ವರ್ಷ ಅದರ ಒತ್ತಡದ ಉತ್ತುಂಗದಲ್ಲಿದೆ. ಈ ಮಧ್ಯೆ ಜಿಲ್ಲಾ ಕಲೋತ್ಸವಗಳಲ್ಲಿ ಭಾಗವಹಿಸಲು ಸಾಧ್ಯವಾದದ್ದು ನಮ್ಮ ವಿದ್ಯಾರ್ಥಿಗಳ ಹೆಮ್ಮೆಯನ್ನು ಹೆಚ್ಚಿಸಿದೆ. ಕಾರಣಾಂತರಗಳಿಂದ ಈ ಬಾರಿ ರಾಜ್ಯ ಮಟ್ಟಕ್ಕೆ ಏರಲು ಸಾಧ್ಯವಾಗಿಲ್ಲ. ಆದರೆ ಇದು ನಮ್ಮ ದೌರ್ಬಲ್ಯ ಅಲ್ಲ, ಸಾಧನೆಯ ಮೆಟ್ಟಿಲು ಎಂಬ ನಿಟ್ಟಿನಲ್ಲಿ ಸ್ವೀಕರಿಸುತ್ತೇವೆ.

ಇಂದು ಸಾಯಂಕಾಲ ಹೊರಡುವ ಮಲಬಾರ್ ಎಕ್ಸ್‌ಪ್ರೆಸ್ ಟ್ರೈನಿನಲ್ಲಿ ನಮ್ಮ ಶಾಲೆಯ ೩೦ ಮಂದಿ ವಿದ್ಯಾರ್ಥಿಗಳು ಅಧ್ಯಾಪಕರೊಂದಿಗೆ ರಾಜ್ಯ ರಾಜಧಾನಿ ತಿರುವನಂತಪುರಕ್ಕೆ ಪ್ರವಾಸ ಹೊರಡುತ್ತಿದ್ದಾರೆ. ನಾಳೆ ಅಲ್ಲೆಲ್ಲ ಶ್ರೀಅನಂತಪದ್ಮನಾಭ ಸ್ವಾಮಿ ದೇವಸ್ಥಾನ, ವಿಧಾನಸಭೆ, ಶಂಖುಮುಖಂ, ಕೋವಳಂ, ಮ್ಯೂಸಿಯಂ ಸುತ್ತಾಡಿ ಬರಲಿದ್ದಾರೆ. ಅವರಿಗೆ ಶುಭ ಪ್ರಯಾಣವನ್ನು ಹಾರೈಸುತ್ತಿದ್ದೇವೆ.

01 January 2011

ರಜಾಕಾಲದ ಕಂಪ್ಯೂಟರ್ ತರಬೇತಿ ಸಮಾರೋಪ

“ಕೇರಳ ವಿದ್ಯಾಭ್ಯಾಸ ಇಲಾಖೆ ಕಂಪ್ಯೂಟರ್ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡುತ್ತಿದೆ. ಐಟಿ ಸ್ಕೂಲ್, ಪ್ರೋಜೆಕ್ಟ್ ವಿದ್ಯಾರ್ಥಿಗಳಿಗಾಗಿ ಗಣಕ ಯಂತ್ರದ ಆಧುನಿಕ ಮಾಹಿತಿಗಳನ್ನು ಒದಗಿಸುತ್ತಿದೆ. ಕಂಪ್ಯೂಟರ್ ರಂಗದಲ್ಲಿ ಆಗುತ್ತಿರುವ ಹೊಸ ಬೆಳವಣಿಗೆಗಳ ಕುರಿತಾದ ವಿವರಗಳನ್ನು ಹಂಚಿಕೊಳ್ಳುವುದಕ್ಕಾಗಿ ರಜಾಕಾಲದ ಈ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಪ್ರತೀ ಜಿಲ್ಲೆಯಲ್ಲೂ ಐದುಸಾವಿರ ಮಂದಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಂತಹ ಕಾರ್ಯವನ್ನು ಈ ಬಾರಿ ಏರ್ಪಡಿಸಲಾಗಿದೆ. ಈ ಮೂಲಕ ಕೇರಳ ರಾಜ್ಯದ ಎಪ್ಪತ್ತುಸಾವಿರ ಮಂದಿ ವಿದ್ಯಾರ್ಥಿಗಳು ಮಾತೃಭಾಷೆಯಲ್ಲಿ ಟೈಪ್ ಮಾಡುವುದು ಮತ್ತು ಇಂಟರ್‌ನೆಟ್ ಮೂಲಕ ವ್ಯವಹರಿಸಲು ಪ್ರಾಪ್ತರಾಗಲಿದ್ದಾರೆ” ಎಂದು ಕಾಸರಗೋಡು ಜಿಲ್ಲಾ ಮಾಸ್ಟರ್ ಟ್ರೈನರ್ ರಾಜೇಶ್ ಎಂ.ಪಿ ಹೇಳಿದರು. ಅವರು ನಮ್ಮ ಶಾಲೆಯಲ್ಲಿ ಕಳೆದ ಆರು ದಿನಗಳಿಂದ ನಡೆಯುತ್ತಿರುವ ಮೂರು ತಂಡಗಳ ಸ್ಟೂಡೆಂಟ್ ಸ್ಕೂಲ್ ಐಟಿ ಕೋ-ಓರ್ಡಿನೇಟರ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಇಂದು ಭಾಗವಹಿಸಿ ಮಾತನಾಡುತ್ತಿದ್ದರು.

ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಜಯದೇವ ಖಂಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೀರ್ಚಾಲು ಘಟಕ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ಸಂಪನ್ಮೂಲ ವ್ಯಕ್ತಿ ಕಾನ ರವಿಶಂಕರ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಮುಕ್ತೇಶ.ಬಿ ಸ್ವಾಗತಿಸಿ ಉಮೈಮತ್ ವಂದಿಸಿದರು. ಗಿರಿಶಂಕರ.ಕೆ ಕಾರ್ಯಕ್ರಮ ನಿರೂಪಿಸಿದರು. ಸ್ವಾತಿ ಮಯ್ಯ ಹಾಗೂ ಶ್ರೀರಶ್ಮಿ. ಸಿ.ಎಸ್ ಪ್ರಾರ್ಥನೆ ಹಾಡಿದರು. ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ಒಟ್ಟು ೯೦ ಕೇಂದ್ರಗಳಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಒಟ್ಟು ೫೦೩೨ ಮಂದಿ ವಿದ್ಯಾರ್ಥಿಗಳು ಈ ವಿಶೇಷ ತರಬೇತಿಯನ್ನು ಪಡೆದಿದ್ದಾರೆ.

31 December 2010

ಹೊಸ ವರ್ಷದ ಶುಭಾಶಯಗಳು...

ವ್ಯಾವಹಾರಿಕವಾಗಿ ನಾಳೆಯಿಂದ ೨೦೧೧ ಹೊಸ ವರ್ಷ ಪ್ರಾರಂಭ. ನಮಗೆಲ್ಲರಿಗೂ ಹೊಸ ಕ್ಯಾಲೆಂಡರ್ ವರ್ಷ ಸುಖ, ಶಾಂತಿ, ನೆಮ್ಮದಿ ತರಲೆಂದು ಹಾರೈಸುತ್ತೇವೆ.

27 December 2010

ಸಮಗ್ರ ಪ್ರಶಸ್ತಿ ಪಡೆದ ತಂಡ

ಕುಂಬಳೆ ಉಪಜಿಲ್ಲಾ ಮಟ್ಟದಲ್ಲಿ ಶಾಲೆಗೆ ಸಂಸ್ಕೃತೋತ್ಸವ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದ ತಂಡ, ಪ್ರಸ್ತುತ ಮುಂದಿನ ಹಂತದ ಸ್ಪರ್ಧೆಗಳಿಗೆ ತಯಾರಾಗುತ್ತಿದೆ. ಜನವರಿ ಎರಡನೇ ವಾರದಲ್ಲಿ ಕಾಞಂಗಾಡು ಸಮೀಪದ ಬಲ್ಲಾ ಪ್ರೌಢಶಾಲೆಯಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಗಳು ಜರಗಲಿವೆ. ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಶುಭಾಶಯಗಳು.

10 December 2010

ಸಂಸ್ಕೃತೋತ್ಸವ ಚಾಂಪಿಯನ್, ಸಮಗ್ರ ರನ್ನರ್ಸ್ ಅಪ್...


ನಮ್ಮ ನಿಮ್ಮೆಲ್ಲರ ಹಾರೈಕೆ ಸಫಲವಾಗಿದೆ. ಸೂರಂಬೈಲಿನಲ್ಲಿ ನಿನ್ನೆ ಮುಕ್ತಾಯವಾದ ಕುಂಬಳೆ ಉಪಜಿಲ್ಲಾ ಕಲೋತ್ಸವದಲ್ಲಿ ನಮ್ಮ ವಿದ್ಯಾರ್ಥಿಗಳು ಕೆಲವಾರು ಟ್ರೋಫಿಗಳನ್ನು ಕೂಡಾ ಹೊತ್ತು ತಂದಿದ್ದಾರೆ. ಸಂಸ್ಕೃತೋತ್ಸವ ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಮತ್ತು ಯುಪಿ ವಿಭಾಗದಲ್ಲಿ ದ್ವಿತೀಯ ಸ್ಥಾನದ ಗೌರವದಿಂದಾಗಿ ನಮ್ಮ ವಿದ್ಯಾರ್ಥಿಗಳಿಗೆ ಅರ್ಹವಾದ ಸಂಸ್ಕೃತೋತ್ಸವ ಚಾಂಪಿಯನ್ ಪ್ರಶಸ್ತಿ ದೊರೆತಿದೆ. ಉಳಿದ ವಿಭಾಗಗಳಲ್ಲೂ ಬಹುಮಾನಗಳು ಬಂದಿರುವುದರಿಂದ ಎಲ್ಲಾ ವಿಭಾಗದ ಕಲೋತ್ಸವದಲ್ಲಿ ರನ್ನರ್ಸ್ ಅಪ್ ಆಗಲು ಸಾಧ್ಯವಾಗಿದೆ. ನಿಮಗಾಗಿ ಒಂದು ಸೂಚನೆ: ಪ್ರಥಮ ಸ್ಥಾನ ಪಡೆದ ಶಾಲೆಯಲ್ಲಿ ಒಂದರಿಂದ ಹನ್ನೆರಡರ ತನಕ ತರಗತಿಗಳಿವೆ, ಅರಬಿಕ್ ಸ್ಪರ್ಧೆಗಳಲ್ಲಿ ಭಾಗವಿಸುವ ವಿದ್ಯಾರ್ಥಿಗಳಿದ್ದಾರೆ. ನಮ್ಮ ವಿದ್ಯಾರ್ಥಿಗಳು ಐದರಿಂದ ಹತ್ತು ತರಗತಿಯವರು ಮಾತ್ರ.

08 December 2010

ಕುಂಬಳೆ ಉಪಜಿಲ್ಲಾ ಕಲೋತ್ಸವ: ನಾವು ಮುನ್ನಡೆಯಲ್ಲಿ...

ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಮೊನ್ನೆ ೩ನೇ ತಾರೀಕಿನಂದು ಸೂರಂಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭವಾದ ವಿಚಾರ ನಮಗೆ ತಿಳಿದಿರಬಹುದು. ಇಂದು ಮಧ್ಯಾಹ್ನ ದೊರೆತ ವಿವರದ ಪ್ರಕಾರ ನಮ್ಮ ಶಾಲೆ ಸಮಗ್ರ ೧೬೯ ಅಂಕಗಳನ್ನು ಪಡೆದು ಪ್ರಥಮ ಸ್ಥಾನದಲ್ಲಿ ಮುಂದುವರಿಯುತ್ತಿದೆ.

01 December 2010

ಚಿಣ್ಣರ ಅಂಗಳಕ್ಕೆ ಪುತ್ಥಳಿ ಯಾತ್ರೆ

ಕಾಸರಗೋಡಿನ ಪ್ರಸಿದ್ಧ ಗೊಂಬೆಯಾಟ ಸಂಘದ ರೂವಾರಿ, ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ನಮ್ಮ ಶಾಲಾ ಹಳೆ ವಿದ್ಯಾರ್ಥಿ ಕೆ.ವಿ.ರಮೇಶ್ ನೇತೃತ್ವದಲ್ಲಿ ಗೋಪಾಲಕೃಷ್ಣ ಗೊಂಬೆಯಾಟ ಸಂಘದ ‘ನರಕಾಸುರ ವಧೆ’ ಪ್ರದರ್ಶನ ನಿನ್ನೆ ನಮ್ಮ ಶಾಲೆಯಲ್ಲಿ ಜರಗಿತು. ನಮ್ಮ ಶಾಲಾ ಮುಖ್ಯೋಪಾಧ್ಯಾಯರಾದ ಯು.ರವಿಕೃಷ್ಣ ವಿನೂತವಾಗಿ ಸೂತ್ರದ ಗೊಂಬೆಯ ಸಹಾಯದಿಂದ ಉದ್ಘಾಟನೆ ನೆರವೇರಿಸಿದರು. ಗೊಂಬೆಯಾಟ ಕಾರ್ಯಕ್ರಮ ನಮ್ಮ ಪುಟಾಣಿಗಳ ಮನಸೂರೆಗೊಂಡಿತು.

29 November 2010

ಡಾ| ಮಹೇಶ್ - ಅಭಿನಂದನೆಗಳು

ನಿನ್ನೆ ಬದಿಯಡ್ಕ ನವಜೀವನ ಹಿರಿಯ ಪ್ರೌಢಶಾಲೆಯಲ್ಲಿ ಒಂದು ಒಳ್ಳೆಯ ಕಾರ್ಯಕ್ರಮ. ನಮ್ಮ ಶಾಲಾ ಹಳೆ ವಿದ್ಯಾರ್ಥಿ ಡಾ ಕೂಳಕ್ಕೋಡ್ಳು ಮಹೇಶ್‍ಗೆ ಅಭಿನಂದನಾ ಸಮಾರಂಭ. ಮನ ತುಂಬಿ ಹರಸಿದ ಸಭಾಸದರ ಮಧ್ಯೆ ಹಿರಿಯ ಸಂಸ್ಕೃತ ತಜ್ಞ ಡಾ ನಿಟಿಲಾಪುರ ಕೃಷ್ಣಮೂರ್ತಿ ಊರ ನಾಗರಿಕರ ಪರವಾಗಿ ಮಹೇಶರನ್ನು ಅಭಿನಂದಿಸಿದರು. ಮಹೇಶ್‍ಗೆ ನಮ್ಮೆಲ್ಲರ ಪ್ರೀತಿಯ ಹಾರೈಕೆಗಳು... ಚಂದದ ಫೋಟೋ ಒದಗಿಸಿದ ಯೇನಂಕೂಡ್ಳು ಕಿಶೋರ್ ಇವರಿಗೂ ಕೃತಜ್ಞತೆಗಳು...

26 November 2010

ಕೂಳಕ್ಕೋಡ್ಳು ಮಹೇಶ್‌ಗೆ ಅಭಿನಂದನೆ - ಬನ್ನ್ರಿ...

ನಮ್ಮ ಶಾಲಾ ಹಳೆವಿದ್ಯಾರ್ಥಿ ಕೂಳಕ್ಕೋಡ್ಳು ಮಹೇಶ್ ಡಾಕ್ಟರೇಟ್ ಗೌರವ ಪಡೆದ ಸುದ್ದಿಯನ್ನು ಈ ಹಿಂದೆಯೇ ಹೇಳಿದ್ದೇವೆ. ಊರವರೆಲ್ಲ ಸೇರಿಕೊಂಡು ಡಾಕೂಳಕ್ಕೋಡ್ಳು ಮಹೇಶ್ ಅಭಿನಂದನಾ ಸಮಿತಿ ರೂಪಿಸಿ, ನಾಡಿದ್ದು ಭಾನುವಾರ ನವೆಂಬರ್ ೨೮ ರಂದು ಅಪರಾಹ್ನ ೩.೩೦ಕ್ಕೆ ಬದಿಯಡ್ಕ ನವಜೀವನ ಪ್ರೌಢಶಾಲಾ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ತಾವೆಲ್ಲರೂ ಬರಬೇಕಾಗಿ ಅಪೇಕ್ಷೆ.

24 November 2010

ವಿದ್ಯಾರಂಗ ಕಲಾ ಸಾಹಿತ್ಯೋತ್ಸವ




“ಸಾಹಿತ್ಯ ಮತ್ತು ಕಲೆ ಶರೀರದ ಮಾನಸಿಕ ನೆಮ್ಮದಿಯ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎನ್ನುವುದು ವೈಜ್ಞಾನಿಕ ಸತ್ಯ. ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ಚಿಗುರುವ ಸಾಹಿತ್ಯದ ಮೊಳಕೆ ಅವರನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ. ವಿದ್ಯಾರ್ಥಿಗಳಲ್ಲಿ ಕಲೆ ಮತ್ತು ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿದ್ಯಾರಂಗ ಕಲಾ ಸಾಹಿತ್ಯವೇದಿಕೆಯ ಪ್ರಯತ್ನ ಶ್ಲಾಘನೀಯ” ಎಂದು ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ ಅಭಿಪ್ರಾಯಪಟ್ಟರು. ಅವರು ನಿನ್ನೆ ಬೆಳಗ್ಗೆ ನಮ್ಮ ಶಾಲೆಗಳಲ್ಲಿ ನಡೆದ ಕುಂಬಳೆ ಉಪಜಿಲ್ಲಾ ವಿದ್ಯಾರಂಗ ಕಲಾ ಸಾಹಿತ್ಯೋತ್ಸವ - ೨೦೧೦ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಹಾಜನ ವಿದ್ಯಾ ಸಂಸ್ಥೆಗಳ ವ್ಯವಸ್ಥಾಪಕ ಖಂಡಿಗೆ ಶಾಮ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕರುಣಾಕರ ಅನಂತಪುರ ಧ್ವಜಾರೋಹಣ ನೆರವೇರಿಸಿದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯರಾದ ಸೌಮ್ಯಾ ಮಹೇಶ್, ಗಂಗಾಧರ ಗೋಳಿಯಡ್ಕ, ಮಂಜುನಾಥ, ಮಹಾಜನ ವಿದ್ಯಾಸಂಸ್ಥೆಗಳ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ನಟರಾಜ ರಾವ್ ಮತ್ತು ಬಾಲಕೃಷ್ಣ ಶೆಟ್ಟಿ, ಕಾರ್ಯಕಾರೀ ಸಮಿತಿ ಸದಸ್ಯ ಶಂಕರನಾರಾಯಣ ಭಟ್ ದೇವಸ್ಯ ಶುಭಹಾರೈಸಿದರು.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಸ್ವಾಗತಿಸಿದರು. ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಶಿಕ್ಷಕಿ ವಾಣಿ ಪಿ.ಎಸ್ ಕಾರ್ಯಕ್ರಮ ನಿರೂಪಿಸಿದರು. ಕುಂಬಳೆ ಉಪಜಿಲ್ಲೆಯ ವಿವಿಧ ಶಾಲೆಗಳಿಂದ ಬಂದ ೬೦೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ೧೭ ವೇದಿಕೆಗಳಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಜೋನಿ ಕ್ರಾಸ್ತಾ, ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಜಿಲ್ಲಾ ಸಂಚಾಲಕ ಅಶೋಕನ್ ಕುಣಿಯೇರಿ, ಕೇರಳ ವ್ಯಾಪಾರೀ ವ್ಯವಸಾಯಿ ಏಕೋಪನ ಸಮಿತಿಯ ನೀರ್ಚಾಲು ಘಟಕದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಶುಭಹಾರೈಸಿದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಶೀಲಾ ಕೆ.ಎನ್. ಭಟ್ ಬಹುಮಾನ ವಿತರಿಸಿದರು.
ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕರುಣಾಕರ ಅನಂತಪುರ ಸ್ವಾಗತಿಸಿದರು. ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಉಪಜಿಲ್ಲಾ ಕಾರ್ಯದರ್ಶಿ ಜಯನ್ ಮಾಸ್ತರ್ ವಂದಿಸಿದರು. ಶಿಕ್ಷಕಿ ಶೈಲಜಾ.ಎ ಕಾರ್ಯಕ್ರಮ ನಿರೂಪಿಸಿದರು.

08 November 2010

೨೩ ಕ್ಕೆ ಉಪಜಿಲ್ಲಾ ವಿದ್ಯಾರಂಗ ಕಲೋತ್ಸವ, ಬನ್ನಿ...

ಕುಂಬಳೆ ಉಪಜಿಲ್ಲಾ ಮಟ್ಟದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಕಲೋತ್ಸವ-೨೦೧೦ ನಮ್ಮ ಶಾಲೆಯಲ್ಲಿ ೨೩.೧೧.೨೦೧೦ ಮಂಗಳವಾರ ಜರಗಲಿರುವುದು. ದಿನಪೂರ್ತಿ ನಡೆಯುವ ಈ ಕಾರ್ಯಕ್ರಮದಲ್ಲಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೊರಗೆಡವಲಿದ್ದಾರೆ. ಈ ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಆತ್ಮೀಯ ಸ್ವಾಗತ.

01 November 2010

ರಾಜ್ಯೋತ್ಸವ ಶುಭಾಶಯಗಳು...

ಇಂದು ಕೇರಳ, ಕರ್ನಾಟಕ ರಾಜ್ಯಗಳಿಗೆ ಹುಟ್ಟಿದ ಹಬ್ಬ. ಈ ಶುಭ ಮುಹೂರ್ತದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾವಧಿ ಪರೀಕ್ಷೆಗಳು ಆರಂಭವಾಗಿವೆ. ಎಲ್ಲರಿಗೂ ಶುಭಾಶಯಗಳು.

20 October 2010

ಇಂದು ಕ್ರೀಡಾ ದಿನ

ಶಾಲಾ ಮಟ್ಟದ ಕ್ರೀಡಾ ಚಟುವಟಿಕೆಗಳು ಇಂದು ಮತ್ತು ನಾಳೆ ನಡೆಯಲಿವೆ. ವಿದ್ಯಾರ್ಥಿಗಳು ಹೊಸ ಉನ್ಮೇಷದೊಂದಿಗೆ ಸ್ಪರ್ಧೆಗಳಲ್ಲಿ ತಲ್ಲೀನರಾಗಿದ್ದಾರೆ. ಆಟ, ಓಟ... ಹೀಗೆ ಮೈದಾನ ತುಂಬ ಚಟುವಟಿಕೆಗಳು... ಎಲ್ಲ ಸ್ಪರ್ಧಾಳುಗಳಿಗೆ ನಮ್ಮ ಶುಭಾಶಯಗಳು.

19 October 2010

ಹಾಲು ವಿತರಣೆ

ಕೇರಳ ಸರಕಾರ ರಾಜ್ಯ ಮಟ್ಟದಲ್ಲಿ ವಾರದ ಎರಡು ದಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಾಲು ವಿತರಿಸಲು ನಿರ್ಧರಿಸಿದೆ. ಆ ಪ್ರಕಾರ ಇಂದು ಈ ಕಾರ್ಯಕ್ರಮದ ಶಾಲಾ ಉದ್ಘಾಟನೆಯನ್ನು ನಮ್ಮ ವಿದ್ಯಾಸಂಸ್ಥೆಗಳ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರುಗಳಾದ ಎಂ. ನಟರಾಜ ರಾವ್ ಮತ್ತು ಬಾಲಕೃಷ್ಣ ಶೆಟ್ಟಿ ನೆರವೇರಿಸಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಉಪಸ್ಥಿತರಿದ್ದರು.

ಶ್ರೀ ಶಾರದಾ ಪೂಜೆ

ಮೊನ್ನೆ ಭಾನುವಾರ ನಮ್ಮ ವಿದ್ಯಾಸಂಸ್ಥೆಗಳಲ್ಲಿ ಶಾರದಾ ಪೂಜೆಯ ಸಂಭ್ರಮ. ಶ್ರೀಯುತ ಗೋಪಾಲಕೃಷ್ಣ ಭಟ್ಟರು ಶಾರದಾ ಪೂಜೆಯ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು. ಅಷ್ಟಾವಧಾನ ಸೇವೆ ನಮ್ಮ ಶಾಲಾ ಸಂಸ್ಕೃತ ಅಧ್ಯಾಪಕ ಶ್ರೀ ಎಸ್. ವಿ. ಭಟ್ಟರ ನೇತೃತ್ವದಲ್ಲಿ ಶ್ರೀ ಶಾರದಾಂಬೆಗೆ ಅಷ್ಟಾವಧಾನ ಸೇವೆ ಜರಗಿತು. ಆದರೆ ಈ ಎಲ್ಲ ಸಂಭ್ರಮಗಳ ನಡುವೆ ಒಂದು ಕಹಿ ನೆನಪು ನಮ್ಮನ್ನು ಕಾಡುತ್ತಿತ್ತು. ಕಳೆದ ವರ್ಷ ನಮ್ಮ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಇದೇ ದಿನ ೧೭.೧೦.೨೦೦೯ ರಂದು ಎರ್ದುಂಕಡವು ಹೊಳೆಯಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟಿದ್ದರು. ಅವರ ನೆನಪಿನಲ್ಲಿ ಎರಡು ದಿನ ಮ್ಲಾನವಾಗಿ ಕಳೆದು ಹೋಯಿತು. ಮೃತರ ಆತ್ಮಕ್ಕೆ ಮತ್ತೆ ನಮನಗಳನ್ನು ಸಲ್ಲಿಸುತ್ತೇವೆ...

13 October 2010

ಕೇರಳ ಕ್ರೀಡಾ ದಿನ ಆಚರಣೆ

ಕೇರಳ ರಾಜ್ಯ ಮಟ್ಟದ ಕ್ರೀಡಾ ದಿನಾಚರಣೆಯನ್ನು ಇಂದು ನಮ್ಮ ಶಾಲೆಯಲ್ಲಿ ಆಚರಿಸಲಾಯಿತು. ನಿವೃತ್ತ ಪೋಲೀಸ್ ಅಧಿಕಾರಿ ನಾರಾಯಣ ಸಾಮೂಹಿಕ ಓಟ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಷ್ಣುಮೂರ್ತಿ ನಗರದಿಂದ ನೀರ್ಚಾಲು ಶಾಲಾ ವಠಾರದ ತನಕ ನಡೆದ ಓಟದಲ್ಲಿ ಊರ ಉತ್ಸಾಹಿ ತರುಣರು, ಶಾಲಾ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಭಾಗವಹಿಸಿದ್ದರು.

11 October 2010

ಶಾಲೆ ತುಂಬ ಕಲೋತ್ಸವದ ಕಲರವ

ನಮ್ಮ ಶಾಲಾ ಮಟ್ಟದ ಯುವಜನೋತ್ಸವ, ಸಂಸ್ಕೃತೋತ್ಸವ ಸ್ಪರ್ಧೆಗಳು ಇಂದು, ನಾಳೆ ನಡೆಯಲಿದೆ. ಎಲ್ಲ ವಿದ್ಯಾರ್ಥಿಗಳಿಗೂ ಶುಭಾಶಯಗಳು. ಇದು ವಿದ್ಯಾರ್ಥಿಗಳ ಪ್ರತಿಭೆ ಸಾರುವ ಚಿತ್ರ, ಎಂಟನೇ ತರಗತಿಯ ಗೌತಮ್ ಬಿಡಿಸಿದ್ದು.