Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

04 February 2009

ಕಥೆ ೦೨ - ಬೋರನ ಅವಾಂತರ

- ಚೈತ್ರ ಟಿ.ಎಸ್

ನಮ್ಮಲ್ಲಿ ಅಡಿಕೆ ತೋಟವೇ ಹೆಚ್ಚು. ಆದರೆ ಇಲ್ಲಿಯ ಕೃಷಿ ಶಿವಮೊಗ್ಗದಂತಲ್ಲ. ಮಳೆಗಾಲದಲ್ಲಿ ನೀರೋ ನೀರು, ಬೇಸಿಗೆಯಲ್ಲಿ ತತ್ವಾರ. ಮಳೆಗಾಲವಿಡೀ ತೋಟದಲ್ಲಿ ಬೆಳೆದ ಕಳೆಗಿಡಗಳನ್ನು ಕಡಿದು ಮರಗಳ ಬುಡಕ್ಕೆ ಇಡುವುದು ವಾಡಿಕೆ. ಮಳೆಗಾಲದ ನಂತರದ ಮೊದಲ ಕೆಲಸ ಇದು.

ಬೋರ ನಮ್ಮ ಕೆಲಸದಾಳು. ಸುಮಾರು ವರ್ಷಗಳಿಂದ ನಮ್ಮಲ್ಲೇ ಕೆಲಸ ಮಾಡುತ್ತಿದ್ದ. ಆತನ ಚುರುಕುತನಕ್ಕೆ ಎಲ್ಲರೂ ತಲೆದೂಗಿದರೂ ಆತನೊಬ್ಬ ಪುಕ್ಕಲ. ದೇವರು, ದೆವ್ವ, ಭೂತಗಳ ಬಗ್ಗೆ ಆತನಿಗೆ ಅಪಾರ ನಂಬಿಕೆ. ಕಳೆದ ವರ್ಷವೂ ನಮ್ಮ ತೋಟದ ಕಳೆ ತೆಗೆಯುವ ಕೆಲಸಕ್ಕೆ ಆತನೆ ಬಂದಿದ್ದ. ಏಳೇ ದಿನಗಳಲ್ಲಿ ತೋಟದ ಕಳೆ ಖಾಲಿ ಮಾಡಿದ್ದ. ಇವತ್ತು ಕೆಲಸ ಮುಗಿಯುತ್ತದೆ ಎಂದು ಅಂದುಕೊಂಡಿದ್ದಾಗ ಮುಸ್ಸಂಜೆಯ ಹೊತ್ತಿನಲ್ಲಿ ತೋಟದಿಂದ ಕೇಳಿತು ಬೋರನ ಧ್ವನಿ. “ಅಯ್ಯಯ್ಯೋ, ಹಾವು ಕಚ್ಚಿತಪ್ಪೋ, ಓ ದೇವರೇ, ಯಾರಾದರೂ ಕಾಪಾಡೀ...” ಹೀಗೆ ಸಾಗಿತು ಆತನ ಬೊಬ್ಬೆ.

ನಾವು ಓಡೋಡಿ ಆತನ ಬಳಿಗೆ ಸಾಗಿದೆವು. ಆತ ಅಲ್ಲೇ ನೆಲದಲ್ಲಿ ಹೊರಳಾಡುತ್ತಿದ್ದ. ಮಾತಿಲ್ಲ, ಕತೆಯಿಲ್ಲ, ನಾವಂತೂ ಭಯದಿಂದ ಶೆಟ್ರ ಜೀಪಿಗೆ ಹೇಳಿ ಕಳುಹಿಸಿದೆವು. ಬೋರನನ್ನು ಜೀಪಿಗೆ ಹಾಕಿ ಕಾಸರಗೋಡಿನ ನರ್ಸಿಂಗ್ ಹೋಮ್ ತಲಪಿಸಿದೆವು.

ವೈದ್ಯರು ತಕ್ಷಣ ಸ್ಪಂದಿಸಿದರು. ನಮಗಂತೂ ಈತನ ಜೀವ ಉಳಿದರೆ ಸಾಕಪ್ಪಾ ಎನಿಸಿತ್ತು. ಆದರೆ ಡಾಕ್ಟರು ಹೇಳಿದ್ದು ಕೇಳಿ ನಮಗೆ ನಗುವುದೋ, ಅಳುವುದೋ ತಿಳಿಯಲಿಲ್ಲ. ತೋಟದ ಕತ್ತಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಏನೋ ಕಚ್ಚಿದಂತಾಗಿ ಬೋರ ಹಾವು ಎಂದು ಕಿರುಚಿದ್ದಂತೆ. ಅದೇನೆಂದು ಆತನಿಗೆ ಕಾಣಿಸಲಿಲ್ಲ. ಪುಕ್ಕಲನಾದ ಆತ ಅದನ್ನು ಹಾವೆಂದೇ ತಿಳಿದು ಬೊಬ್ಬಿರಿದಿದ್ದ.

ಕೊನೆಗೆ ವೈದ್ಯರು ಹೇಳಿದರು, ಆತನಿಗೆ ಕಚ್ಚಿದ್ದು ಕೆಂಪಿರುವೆ!

2 comments:

  1. ಹಹ!. ಚೆನ್ನಾಗಿದೆ.
    ರವಿಶಂಕರ್, ಸಾಧ್ಯವಾದರೆ ನಿಮ್ಮ ಶಾಲೆಯ ಮಕ್ಕಳನ್ನು ಒಮ್ಮೆ ಐತಾಳರ ನಾಗವನಕ್ಕೆ (ಪುತ್ತೂರು) ಕರೆದುಕೊಂಡು ಹೋಗಿ. ಅವರು ತುಂಬಾ ಚೆನ್ನಾಗಿ ಹಾವುಗಳ ಬಗ್ಗೆ ತಿಳಿಸುತ್ತಾರೆ. ಹಾವುಗಳನ್ನು ಮುಟ್ಟಿ ನೋಡಿ ಆನಂದಿಸಬಹುದು.
    http://sampada.net/blog/vasanth-kaje/28/12/2008/15112

    ವಂದನೆಗಳು,
    ವಸಂತ್ ಕಜೆ.

    ReplyDelete
  2. ನಿಮ್ಮ ಸಲಹೆಗೆ ಧನ್ಯವಾದಗಳು. ನಮ್ಮ ಶಾಲೆಯಿಂದ ಸಾಕಷ್ಟು ಬಯಲು ಪ್ರವಾಸ ಕೈಗೊಂಡಿದ್ದೇವೆ. ಆದರೆ ಐತಾಳರಲ್ಲಿಗೆ ಹೋಗಲು ಸಾಧ್ಯವಾಗಿರಲಿಲ್ಲ. ನಿಮ್ಮ ಸಲಹೆಯಿಂದ ನಮ್ಮ ಉತ್ಸಾಹ ಹೆಚ್ಚಿದೆ.

    ವಂದನೆಗಳು,
    ರವಿಶಂಕರ ದೊಡ್ಡಮಾಣಿ.

    ReplyDelete