Flash

Flash: ನಮ್ಮ ಶಾಲೆಯ 12 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

09 January 2010

ನೀರ್ಚಾಲಿನಲ್ಲಿ ಕನ್ನಡ ಯುವಜನೋತ್ಸವ ಆರಂಭ


ಕನ್ನಡದೋಜ ಪೆರಡಾಲ ಕೃಷ್ಣಯ್ಯ ನಗರ ನವವಧುವಿನಂತೆ ಸಿಂಗರಿಸಲ್ಪಟ್ಟಿದೆ. ತಳಿರು ತೋರಣಗಳು ಕನ್ನಡಾಭಿಮಾನಿಗಳನ್ನು ಕೈಬೀಸಿ ಕರೆಯುತ್ತಿದೆ. ಎರಡು ದಿನಗಳ ಕಾಲ ನಡೆಯುವ ಸಾಹಿತ್ಯ ಸಮ್ಮೇಳನದ ಪೂರ್ವಭಾವೀ ಸಿದ್ಧತೆಗಳು ಪೂರ್ತಿಗೊಂಡಿವೆ. ಜನಪ್ರವಾಹ ನೀರ್ಚಾಲಿನತ್ತ ಹರಿದುಬರುತ್ತಿದೆ. ಕಾಸರಗೋಡು ಜಿಲ್ಲಾ ಕನ್ನಡ ಯುವಜನೋತ್ಸವ ಮತ್ತು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನ - ೨೦೧೦ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಆವರಣದಲ್ಲಿ ಸಿದ್ಧಪಡಿಸಲಾದ ಕನ್ನಡದೋಜ ಪೆರಡಾಲ ಕೃಷ್ಣಯ್ಯ ಮಹಾನಗರಿ ಮತ್ತು ಡಾ ಲಲಿತಾ ಎಸ್.ಎನ್. ಭಟ್ ವೇದಿಕೆಯಲ್ಲಿ ೦೯.೦೧.೨೦೧೦ ಶನಿವಾರದಂದು ಬೆಳಗ್ಗೆ ವಿಧ್ಯುಕ್ತವಾಗಿ ಆರಂಭವಾಯಿತು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡು ಘಟಕದ ಆಶ್ರಯದಲ್ಲಿ ಜರಗುತ್ತಿರುವ ಈ ಸಮ್ಮೇಳನವನ್ನು ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಖಂಡಿಗೆ ಶಾಮ ಭಟ್ ಧ್ವಜಾರೋಹಣಗೈದು ಚಾಲನೆ ನೀಡಿದರು . ಶಾಲಾ ವಿದ್ಯಾರ್ಥಿಗಳ ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ ಎನ್.ಕೆ.ಮೋಹನದಾಸ್ ಉದ್ಘಾಟಿಸಿದರು.
“ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳಲ್ಲಿ ಕನ್ನಡದ ಬಗ್ಗೆ ಕೀಳರಿಮೆ ಬಾರದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರಲ್ಲಿದೆ. ಹೆಚ್ಚಿನ ಸ್ಪರ್ಧೆಗಳು ಪ್ರಶಸ್ತಿಯ ದೃಷ್ಟಿಕೋನದಿಂದ ನಡೆಯುತ್ತಿದೆ ಅವುಗಳು ವಿದ್ಯಾರ್ಥಿಗಳ ವಿಕಾಸಕ್ಕೆ ಪೂರಕವಲ್ಲ. ಆದ್ದರಿಂದ ಕನ್ನಡದ ಬೆಳವಣೆಗೆಗೆ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ" ಎಂದು ಅವರು ಈ ಸಂದರ್ಭದಲ್ಲಿ ನುಡಿದರು. ಕಸಾಪ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಮಾಹಿನ್ ಕೇಳೋಟ್ ಮತ್ತು ಖ್ಯಾತ ಉದ್ಯಮಿ ಕೆ.ಅಜಿತ್ ಕುಮಾರ್ ರೈ ಮುಖ್ಯ ಅತಿಥಿಗಳಾಗಿದ್ದರು. ಕಾರಡ್ಕ ಗ್ರಾಮ ಪಂಚಾಯತು ಅಧ್ಯಕ್ಷೆ ಜಯಲಕ್ಷ್ಮೀ ಭಟ್, ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯೆ ರತ್ನಾವತಿ, ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರ ಅಧ್ಯಕ್ಷ ಶಂಕರ ರೈ ಮಾಸ್ತರ್, ಕರ್ನಾಟಕ ಸಮಿತಿ ಅಧ್ಯಕ್ಷ ಮುರಳೀಧರ ಬಳ್ಳಕ್ಕುರಾಯ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಗೌರವಾಧ್ಯಕ್ಷ ಕೆ.ಸತ್ಯನಾರಾಯಣ, ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ಮುಖ್ಯೋಪಾಧ್ಯಾಯ ರವಿಕೃಷ್ಣ.ಯು ಶುಭಾಶಂಸನೆಗೈದರು. ನ್ಯಾಯವಾದಿ ಎ.ವಿ.ಶ್ಯಾನುಭೋಗ್, ಭಾಷಾಂತರಗಾರ ಎ. ನರಸಿಂಹ ಭಟ್, ನ್ಯಾಯವಾದಿ ಅಡೂರು ಉಮೇಶ ನಾಯಕ್ ಉಪಸ್ಥಿತರಿದ್ದರು. ಯುವಜನೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ರೈ ಸ್ವಾಗತಿಸಿದರು, ರವೀಂದ್ರ ಎಂ.ಎ, ಮಾನ್ಯ ವಂದಿಸಿದರು. ಶಿವಕುಮಾರ್ ಕೆ.ಪೆರ್ಲ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ವಿಭಾಗಗಳಲ್ಲಿ ಜರಗಿದ ಸ್ಪರ್ಧೆಗಳಲ್ಲಿ ಕಾಸರಗೋಡಿನ ವಿವಿಧ ಭಾಗಳಿಂದ ಆಗಮಿಸಿದ ೧೫೦೦ ಕ್ಕೂ ಮಿಕ್ಕಿ ಸ್ಪರ್ಧಾಳುಗಳು ಭಾಗವಹಿಸಿದರು. ಸುಮಾರು ೨೦೦೦ಕ್ಕೂ ಅಧಿಕ ಮಂದಿ ಮಧ್ಯಾಹ್ನ ಭೋಜನವನ್ನು ಸವಿದಿದ್ದಾರೆ ಎಂದು ಸಮ್ಮೇಳನ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.

3 comments:

 1. ಇನ್ನೊಂದಿಸ್ಟು..ಭಾವಚಿತ್ರಗಳನ್ನು ಹಾಕಿ.ದೂರದ ಊರಿನ ಅಭಿಮಾನಿಗಳಿಗೆ,ಕಣ್ತುಂಬ ನೊಡ್ತೇವೆ.ಕಾಸರಗೋಡಿನ ಕನ್ನಡಿಗರು ಜಗತ್ತಿನೆಲ್ಲೆಡೆ ಇದ್ದಾರಲ್ಲಾ? ಸಂತೋಷ ಪಡ್ತಾರೆ ನೋಡಿ.. ಅಲ್ವೇ?

  ReplyDelete
 2. This comment has been removed by the author.

  ReplyDelete
 3. Sir,
  I request you to publish the results of the competetions held in your school in connection with the kannada sahitya sammelana. Also publish more & more photos of the Sahithya sammelana(and video)so that all Kasaragod kannadigas can vie
  If possible give some photos to publish in E-kanasu

  ReplyDelete