ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಾವರ್ಗಕ್ಕೆ ಡಾ|ಕಲ್ಲಡ್ಕ ಪ್ರಭಾಕರ ಭಟ್ ಇಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ, ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ. ಗೋವಿಂದ ಭಟ್ ಸ್ವಾಗತಿಸಿದರು.
30 December 2011
ಡಾ|ಕಲ್ಲಡ್ಕ ಪ್ರಭಾಕರ ಭಟ್ ಭೇಟಿ...
ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಾವರ್ಗಕ್ಕೆ ಡಾ|ಕಲ್ಲಡ್ಕ ಪ್ರಭಾಕರ ಭಟ್ ಇಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ, ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ, ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ. ಗೋವಿಂದ ಭಟ್ ಸ್ವಾಗತಿಸಿದರು.
21 December 2011
ಅದಮ್ಯ ಚೈತನ್ಯ - ಶ್ರೀ ಖಂಡಿಗೆ ಶಾಮ ಭಟ್ಟ

ನೀರ್ಚಾಲು.
ಶ್ರೀ ಖಂಡಿಗೆ ಶಾಮ ಭಟ್ಟರು ಜ್ಞಾನದಲ್ಲಿ, ವಿದ್ವತ್ತಿನಲ್ಲಿ, ಕಾರ್ಯಪ್ರವೃತ್ತಿಯಲ್ಲಿ, ದೈವಭಕ್ತಿಯಲ್ಲಿ ಮತ್ತು ಜೀವನಾನುಭವದಲ್ಲಿ ‘ತುಂಬಿದ ಕೊಡ’. ಶುಭ್ರ ಶ್ವೇತ ವಸ್ತ್ರ ಅವರ ಅಂತರಂಗದ ಬಿಂಬ. ತೆಳ್ಳನೆಯ ಕಾಯ ಕಟ್ಟುನಿಟ್ಟಿನ ಶಿಸ್ತಿನಾಚರಣೆಯ ಪ್ರತೀಕ. ವಾರ್ಧಕ್ಯದ ಕಾರಣದಿಂದ ‘ಪ್ರಾಂಶುಪಾಲ’ರು ಇತ್ತೀಚೆಗೆ ಸಾರ್ವಜನಿಕ ವೇದಿಕೆಗೆ ಬರುವುದನ್ನು ನಿಲ್ಲಿಸಿದ್ದರು. ಆದರೆ ಅವರ ಮರಣದ ವಾರ್ತೆ ಹಬ್ಬಿದೊಡನೆ ನಿವಾಸಕ್ಕೆ ಜನರ ಪ್ರವಾಹವೇ ಹರಿದು ಬಂದಿತ್ತು! ಜನಾನುರಾಗಕ್ಕೆ ಜಾತಿ, ಮತದ ಎಲ್ಲೆಯಿಲ್ಲ, ಬಡವ ಬಲ್ಲಿದ ಭೇದವಿಲ್ಲ, ರಾಜಕೀಯ ಪಕ್ಷಗಳ ಚೌಕಟ್ಟಿಲ್ಲ. ಇದಕ್ಕೆ ಕಾರಣ ಅವರ ವ್ಯಕ್ತಿತ್ವ.
೯೨ ವರ್ಷಗಳ ತುಂಬಿದ ಬಾಳು ಅವರದು. ವಯಸ್ಸಿನ ಕಾರಣದಿಂದ ಶರೀರ ದುರ್ಬಲವಾದರೂ, ಅನಾರೋಗ್ಯ ಅವರನ್ನು ಕಾಡಿರಲಿಲ್ಲ. ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ವ್ಯವಸ್ಥಾಪಕರಾಗಿದ್ದು ಇಳಿವಯಸ್ಸಿನಲ್ಲಿಯೂ ಅವರು ಶಾಲೆಗೆ ಸುತ್ತು ಬರುತ್ತಿದ್ದ ದೃಶ್ಯ; ಆಗ ಶಾಲಾ ಪರಿಸರ ಮತ್ತು ಮಕ್ಕಳ ಮೇಲೆ ವ್ಯಕ್ತವಾಗುತ್ತಿದ್ದ ಅವರ ಒಲವು ಈಗ ನೆನಪಾಗಿ ಮಾತ್ರ ಉಳಿದಿದೆ. ಸಂಸ್ಥೆಯಲ್ಲಿ ಕಾರ್ಯಕ್ರಮವೇನಾದರೂ ನಡೆಯುತ್ತಿದ್ದರೆ ಐದು ನಿಮಿಷ ಮೊದಲೇ ಹಾಜರಾಗಿ ವ್ಯವಸ್ಥೆಯ ಬಗ್ಗೆ ವಿಚಾರಿಸುವುದು ಅವರ ರೂಢಿ. ಸಾಹಿತ್ಯ ಸಂಸ್ಕೃತಿಯ ಬಗ್ಗೆ ಸಂದೇಹಗಳನ್ನೇನಾದರೂ ಮುಂದಿಟ್ಟರೆ ಮಾಹಿತಿ ಸಹಿತವಾಗಿ ವಿವರಣೆಯನ್ನು ನೀಡುವ ಸೊಗಸೇ ಬೇರೆ.
ಅವರ ಆಶ್ರಯದಲ್ಲಿ ಬೆಳೆದವರು ಹಲವರು. ಆದರೆ, ಅವರು ಸ್ವಂತಕ್ಕಾಗಿ ಏನನ್ನೂ ಬೆಳೆಸಿಕೊಳ್ಳಲಿಲ್ಲ. ವೃತ್ತಿ ಜೀವನದಲ್ಲಿದ್ದಾಗ ವೇತನವನ್ನು ತೆಗೆದುಕೊಳ್ಳಲಿಲ್ಲ! ಮತ್ತೆ ನಿವೃತ್ತಿ ವೇತನವನ್ನೂ ಮುಟ್ಟಲಿಲ್ಲ! ಜ್ಞಾನ, ಅನುಭವ ಮತ್ತು ವಿದ್ವತ್ತು ಮಾತ್ರ ಅವರ ಸಂಪಾದನೆ. ‘ಪರೋಪಕಾರಾರ್ಥಮಿದಂ ಶರೀರಂ’ ಎಂಬುದಕ್ಕೆ ಅವರು ಪ್ರತ್ಯಕ್ಷ ಪ್ರಮಾಣ.
‘ವಿನಾದೈನ್ಯೇನ ಜೀವನಂ, ಅನಾಯಾಸೇನ ಮರಣಂ’ ಇದು ಎಲ್ಲರ ಇಚ್ಛೆ. ಅವರು ತಮ್ಮ ನಿದ್ದೆಯಲ್ಲಿಯೇ ಸಹಜವಾಗಿ ಚಿರನಿದ್ರೆಯತ್ತ ನಡೆದಿದ್ದರು. ದಶಂಬರ ೧೪ರಂದು ಅವರು ದೈವಾಧೀನರಾಗಿ, ಇಂದಿಗೆ ದಿನಗಳು ಕಳೆದವು, ಆದರೆ ನೆನಪುಗಳು ಹಸುರಾಗಿ ಉಳಿದವು. ಇಂತಹ ಸರಳ, ಪ್ರೇಮಮಯಿ, ತ್ಯಾಗಿ, ಜನಪ್ರಿಯ, ಸಜ್ಜನ, ‘ಮಹಾಜನ’ ವ್ಯಕ್ತಿಯ ಚೈತನ್ಯಕ್ಕೆ ಗೌರವಪೂರ್ವಕವಾಗಿ ಭಾವತುಂಬಿದ ನಮನಗಳು.
14 December 2011
ಯುಗಪುರುಷ ಖಂಡಿಗೆ ಶಾಮ ಭಟ್ ಅಸ್ತಂಗತ
‘ಮಹಾಜನ’ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಖಂಡಿಗೆ ಶಾಮ ಭಟ್ಟರ ಹೆಸರು ಕನ್ನಡ ನಾಡಿಗೆ ಚಿರಪರಿಚಿತ. ೧೯೧೯ ಸೆ.೨೮ ರಂದು ಖಂಡಿಗೆ ಮಹಾಲಿಂಗ ಭಟ್ಟ ಮತ್ತು ಶಂಕರಿ ದಂಪತಿಯರ ಪುತ್ರನಾಗಿ ಜನಿಸಿದ ಖಂಡಿಗೆ ಶಾಮ ಭಟ್ಟರು ಕನ್ನಡ ನಾಡಿನ ಶಿಕ್ಷಣಲೋಕಕ್ಕೆ ಸಲ್ಲಿಸಿದ ಸೇವೆ ಅಪಾರ. ಗಡಿನಾಡು ನೆಲದ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸಿದ ಅವರು ಪೆರಡಾಲ ಮಹಾಜನ ಸಂಸ್ಕೃತ ಮಹಾವಿದ್ಯಾಲಯದ ಮಾಧ್ಯಮಿಕ ವಿಭಾಗದಲ್ಲಿ ಪ್ರಾಥಮಿಕ ಕನ್ನಡ ಸಂಸ್ಕೃತ ಶಿಕ್ಷಣ, ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಎಸ್ ಎಸ್ ಎಲ್ ಸಿ, ಮಂಗಳೂರು ಸರಕಾರಿ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್, ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಂಸ್ಕೃತ ಎಂಎ ಪಡೆದ ನಂತರ ಖಾಸಗಿಯಾಗಿ ಅಧ್ಯಯನ ಮಾಡಿ ಕನ್ನಡ ಎಂಎ ಸ್ನಾತಕೋತ್ತರ ಪದವಿಯನ್ನು ಪಡೆದವರು.ಮುಂದೆ ಮಹಾಜನ ಸಂಸ್ಕೃತ ಕಾಲೇಜಿನಲ್ಲಿ ಅಧ್ಯಾಪನ ಸೇವೆಯನ್ನು ಆರಂಭಿಸಿದ ಅವರು ಮದರಾಸು, ಕಲ್ಲಿಕೋಟೆ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸದಸ್ಯ, ಕೇರಳ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ, ಫಾಕಲ್ಟಿ ಓಫ್ ಓರಿಯೆಂಟಲ್ ಸ್ಟಡೀಸ್ ಸದಸ್ಯ, ಸಂಸ್ಕೃತ ವಿದ್ಯಾಭ್ಯಾಸ ಸಮಿತಿ ಸದಸ್ಯ, ಕನ್ನಡ ಪಠ್ಯಪುಸ್ತಕ ತಯಾರಿಕೆಗಾಗಿ ನೇಮಿಸಿದ ಸಮಿತಿ ಅಧ್ಯಕ್ಷ, ಕಾಸರಗೋಡು ಕರ್ನಾಟಕ ಸಮಿತಿ ಅಧ್ಯಕ್ಷ, ಪ್ರತಿಷ್ಟಿತ ಕರ್ನಾಟಕ ಬ್ಯಾಂಕ್ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕ, ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ಹಾಗೂ ಕಾಸರಗೋಡು ಕೃಷಿಕರ ಸಹಕಾರೀ ಮಾರಾಟ ಸಂಘದ ಅಧ್ಯಕ್ಷ, ಪೆರಡಾಲ ಮಹಾಜನ ವಿದ್ಯಾಭಿವರ್ಧಕ ಸಂಘದ ಅಧ್ಯಕ್ಷ, ಶಾಲಾ ವ್ಯವಸ್ಥಾಪಕ ಹೀಗೆ ಹತ್ತು ಹಲವು ವಿಭಾಗಗಳಲ್ಲಿ, ಕ್ಷೇತ್ರಗಳಲ್ಲಿ ದುಡಿದವರು. ೧೯೪೬ರಿಂದ ೧೯೬೬ ರ ತನಕ ಮಹಾಜನ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ವಿದ್ವಜ್ಜನರಿಂದ ಶ್ಲಾಘಿಸಲ್ಪಟ್ಟ ಮಹಾನುಭಾವರು ಖಂಡಿಗೆ ಶಾಮ ಭಟ್ಟರು. ೨೭.೦೮.೧೯೭೩ ರಿಂದ ೨೬.೦೧.೨೦೧೧ ರ ತನಕ ಅವರು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಖಂಡಿಗೆ ಶಾಮ ಭಟ್ಟರ ಪುತ್ರರು ಡಾ| ಸುಬ್ರಹ್ಮಣ್ಯ ಭಟ್, ಡಾ| ಪತಂಜಲಿ, ರಾಮಚಂದ್ರ ಭಟ್, ಕೃಷ್ಣರಾಜ, ಜಯದೇವ ಖಂಡಿಗೆ, ಡಾ| ಗಣೇಶ ಹಾಗೂ ಪುತ್ರಿಯರಾದ ಶಂಕರಿ, ಸುಧಾ, ಪ್ರಭಾ ಮತ್ತು ಮಾಯಾ. ಗಡಿನಾಡು ನೆಲ ಕಾಸರಗೋಡಿನ ಹಿರಿಯ ಕನ್ನಡ ಹೋರಾಟಗಾರ, ಸಂಸ್ಕೃತ ವಿದ್ವಾಂಸ, ತೊಂಭತ್ತೆರಡರ ಹರೆಯದ ಜ್ಞಾನವೃದ್ಧ, ನಿವೃತ್ತ ಪ್ರಾಂಶುಪಾಲ ಖಂಡಿಗೆ ಶಾಮ ಭಟ್ಟರು, ತಮ್ಮ ಪತ್ನಿ ಇಹಲೋಕವನ್ನು ತ್ಯಜಿಸಿ ವರ್ಷ ಕಳೆಯುವುದರ ಮುನ್ನ ೧೪.೧೨.೨೦೧೧ ಬುಧವಾರ ಮುಂಜಾನೆ ೬.೩೦ಕ್ಕೆ ವಿಧಿವಶರಾಗಿದ್ದಾರೆ. ಮೃತರ ಆತ್ಮಕ್ಕೆ ಸದ್ಗತಿಯನ್ನು ಕೋರಿ ಇಂದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮೌನ ಪ್ರಾರ್ಥನೆ ಸಲ್ಲಿಸಿ ಶಾಲೆಗೆ ರಜೆ ಸಾರಲಾಯಿತು. ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ನೀರ್ಚಾಲು ಪೇಟೆಯ ಸಂಸ್ಥೆಗಳು ಖಂಡಿಗೆ ಶಾಮ ಭಟ್ಟರಿಗೆ ಗೌರವ ಸಲ್ಲಿಸಿದವು.
ಶಾಮ ಭಟ್ಟರ ಆತ್ಮಕ್ಕೆ ನಮ್ಮ ಶ್ರದ್ಧಾಂಜಲಿಗಳು...
13 December 2011
ಮಧ್ಯಾವಧಿ ಪರೀಕ್ಷೆ...
07 December 2011
ಶಾಸ್ತ್ರ ಮೇಳದಲ್ಲಿ ರಾಜ್ಯ ಮಟ್ಟಕ್ಕೆ ಐವರು...
ಕಾಞಂಗಾಡಿನಲ್ಲಿ ಜರಗಿದ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ವಿದ್ಯಾರ್ಥಿಗಳ ಶಾಸ್ತ್ರ ಮೇಳದ ಪ್ರೌಢಶಾಲಾ ವಿಭಾಗದಲ್ಲಿ ನಮ್ಮ ಶಾಲೆಯ ಈ ವಿದ್ಯಾರ್ಥಿಗಳು ಕೇರಳ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಂಡಿದ್ದಾರೆ.ಅಭಿಶೇಕ್ - ವಿಜ್ಞಾನ ಮೇಳದ ಇಂಪ್ರೊವೈಸ್ಡ್ ಎಕ್ಸ್‌ಪೆರಿಮೆಂಟ್ - ದ್ವಿತೀಯ ಸ್ಥಾನ
ಶ್ರೀನಿವಾಸ ಪ್ರಸಾದ್ - ವಿಜ್ಞಾನ ಮೇಳದ ಇಂಪ್ರೊವೈಸ್ಡ್ ಎಕ್ಸ್‌ಪೆರಿಮೆಂಟ್ - ದ್ವಿತೀಯ ಸ್ಥಾನ
ಅನ್ವಿತ್. ಎಸ್ - ವೃತ್ತಿ ಪರಿಚಯ ಮೇಳದ ಮೆಟಲ್ ಎನ್‌ಗ್ರೇವಿಂಗ್ - ದ್ವಿತೀಯ ಸ್ಥಾನ
ಮನೋಜ್. ಯು - ವೃತ್ತಿ ಪರಿಚಯ ಮೇಳದ ಕೊಡೆ ತಯಾರಿ - ಪ್ರಥಮ ಸ್ಥಾನ
ನಿಖಿಲ್ ಎಂ.ಡಿ - ವೃತ್ತಿ ಪರಿಚಯ ಮೇಳದ ಇಲೆಕ್ಟ್ರಿಕಲ್ ವಯರಿಂಗ್ - ಪ್ರಥಮ ಸ್ಥಾನ
ಈ ವಿದ್ಯಾರ್ಥಿಗಳು ಮುಂದಿನ ತಿಂಗಳು ಪಾಲಕ್ಕಾಡಿನಲ್ಲಿ ಜರಗಲಿರುವ ಕೇರಳ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಶುಭಾಶಯಗಳು.
06 December 2011
ಕಾವ್ಯಶ್ರೀ ಮತ್ತು ವಿಶ್ವ ರಾಜ್ಯ ಮಟ್ಟಕ್ಕೆ...
ನಮ್ಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಕಾವ್ಯಶ್ರೀ ಎ.ಜೆ ಜ್ಯೂನಿಯರ್ ಹುಡುಗಿಯರ ಜ್ಯಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಮತ್ತು ಎಂಟನೇ ತರಗತಿ ವಿದ್ಯಾರ್ಥಿನಿ ವಿಶ್ವ ಸಿ.ಎಚ್ ಸಬ್ ಜೂನಿಯರ್ ಹುಡುಗಿಯರ ೧೦೦ ಮೀ. ಓಟ, ೨೦೦ ಮೀ. ಓಟ ಹಾಗೂ ಲಾಂಗ್ ಜಂಪ್ ವಿಭಾಗದ ಕೇರಳ ರಾಜ್ಯ ಮಟ್ಟದ ಶಾಲಾ ಕ್ರೀಡಾ ಮೇಳ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಇವರು ಇತ್ತೀಚೆಗೆ ನೀಲೇಶ್ವರದಲ್ಲಿ ಜರಗಿದ ಕಂದಾಯ ಜಿಲ್ಲಾ ಶಾಲಾ ಕ್ರೀಡಾಮೇಳದಲ್ಲಿ ವಿವಿಧ ಬಹುಮಾನಗಳನ್ನು ಪಡೆದಿದ್ದಾರೆ.
29 November 2011
ಚಿತ್ರ - ರಮೇಶ ನಾಯಕ್
29 October 2011
“ಸೃಜನಶೀಲತೆಯಿಂದ ಆನಿಮೇಶನಿನ ಹೊಸ ಉತ್ಪನ್ನ: ಆಗಸ್ಟಿನ್ ಬರ್ನಾಡ್"
“ತಂತ್ರಜ್ಞಾನವನ್ನು ಕಲಿಕೆಯಲ್ಲಿ ಬಳಸಿಕೊಳ್ಳಬೇಕು. ೨೦೦೨ರಲ್ಲಿ ಶಾಲೆಗಳಲ್ಲಿ ಆರಂಭವಾದ ಐಟಿ ಎಟ್ ಸ್ಕೂಲ್ ಯೋಜನೆ ಪ್ರಸ್ತುತ ಮಾಹಿತಿ ತಂತ್ರಜ್ಞಾನ ಆಧಾರಿತ ಶಿಕ್ಷಣ ಪದ್ಧತಿಯನ್ನು ವಿದ್ಯಾರ್ಥಿಗಳಿಗೆ ನೀಡುವಷ್ಟರ ತನಕ ಬೆಳೆದು ನಿಂತಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ನೀಡಲಾಗುತ್ತಿರುವ ಆನಿಮೇಶನ್ ತರಬೇತಿಯೂ ವಿದ್ಯಾರ್ಥಿಗಳ ಎಲ್ಲ ಪಠ್ಯ ವಿಷಯಗಳ ಕಲಿಕೆಯಲ್ಲಿ ನೆರವಾಗಲಿದೆ. ಸೃಜನಶೀಲತೆ ಇದ್ದರೆ ಆನಿಮೇಶನ್ ತಂತ್ರಜ್ಞಾನದ ಮೂಲಕ ಹೊಸ ಉತ್ಪನ್ನವನ್ನು ನಾವು ಜಗತ್ತಿಗೆ ನೀಡಬಹುದು. ಆದ್ದರಿಂದ ಇಲ್ಲಿ ದೊರೆತ ಶಿಕ್ಷಣವನ್ನು ಮುಂದಿನ ಜೀವನದಲ್ಲಿ ಉಪಯೋಗಿಸಿಕೊಳ್ಳಿ” ಎಂದು ಕೇರಳ ವಿದ್ಯಾಭ್ಯಾಸ ಇಲಾಖೆಯ ಮಾಹಿತಿ ತಂತ್ರಜ್ಞಾನ ವಿಭಾಗದ ಕಾಸರಗೋಡು ಜಿಲ್ಲಾ ಮಾಸ್ಟರ್ ಟ್ರೈನರ್ ಆಗಸ್ಟಿನ್ ಬರ್ನಾಡ್ ಅಭಿಪ್ರಾಯಪಟ್ಟರು. ಅವರು ಇಂದು ಅಪರಾಹ್ನ ನಮ್ಮ ಶಾಲೆಯಲ್ಲಿ ನಾಲ್ಕು ದಿನಗಳಿಂದ ಜರಗುತ್ತಿರುವ ‘ಆಂಟ್ಸ್ ಆನಿಮೇಶನ್’ ಕಾರ್ಯಕ್ರಮದ ಸಮಾರೋಪ ಭಾಷಣವನ್ನು ನೆರವೇರಿಸುತ್ತಾ ಮಾತನಾಡುತ್ತಿದ್ದರು.ನೀರ್ಚಾಲಿನ ‘ಶಾರ್ಪ್ ಡಿಜಿಟಲ್ ಸ್ಟುಡಿಯೋ’ ಸಂಸ್ಥೆಯ ಮಾಲಕ ವೇಣುಗೋಪಾಲ ಆರೋಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಆನಿಮೇಶನ್ ಸಾಧ್ಯತೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮಾಹಿತಿ ತಂತ್ರಜ್ಞಾನ ವಿಭಾಗದ ಸಂಯೋಜಕ ಎಚ್. ಸೂರ್ಯನಾರಾಯಣ ಮತ್ತು ಸಂಪನ್ಮೂಲ ಅಧ್ಯಾಪಕ ಬಿ.ಸುಬ್ರಹ್ಮಣ್ಯ ಕೆದಿಲಾಯ ಉಪಸ್ಥಿತರಿದ್ದರು. ತರಬೇತಿ ಪಡೆದ ವಿದ್ಯಾರ್ಥಿಗಳಾದ ಶ್ರೀಶ.ಕೆ ಮತ್ತು ಸುಶೀಲಾ. ಎಸ್ ತಮ್ಮ ಅನುಭವಗಳನ್ನು ಹಂಚಿಕೊಂಡರು.
ವಿದ್ಯಾರ್ಥಿಗಳಾದ ಅನುಶ್ರೀ ಸ್ವಾಗತಿಸಿ ಆದರ್ಶ ಎಚ್.ಎ ವಂದಿಸಿದರು. ಶ್ರದ್ಧಾ.ಎಸ್ ಪ್ರಾರ್ಥಿಸಿದರು ಮತ್ತು ಚೈತಾಲಿ.ಕೆ.ಎನ್ ಕಾರ್ಯಕ್ರಮ ನಿರೂಪಿಸಿದರು. ನಾಲ್ಕು ದಿನಗಳ ಆನಿಮೇಶನ್ ಶಿಬಿರದಲ್ಲಿ ವಿದ್ಯಾರ್ಥಿಗಳಾದ ಶಾಂತಿ.ಕೆ, ಶಶಾಂಕ ಶರ್ಮ.ಎಸ್, ವರ್ಷಾ.ಕೆ, ಸುಬ್ರಹ್ಮಣ್ಯ ಪ್ರಸಾದ.ಕೆ, ಮೇಘನಾ ಮತ್ತು ಅಜಿತ್ ವಿ.ಶರ್ಮ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಇಪ್ಪತ್ತು ಮಂದಿ ವಿದ್ಯಾರ್ಥಿಗಳು ತರಬೇತಿ ಪಡೆದುಕೊಂಡರು.
21 October 2011
‘ಆನಿಮೇಶನ್ ಸಾಧ್ಯತೆಗಳು ಅಪಾರ’: ಜಯದೇವ ಖಂಡಿಗೆ
“ಮಾಹಿತಿ ತಂತ್ರಜ್ಞಾನ ಕ್ಷೇತ್ರ ಅತ್ಯಧಿಕ ಅವಕಾಶಗಳೊಂದಿಗೆ ತೆರೆದುಕೊಳ್ಳುತ್ತಿದೆ. ಆಧುನಿಕ ಜಗತ್ತಿನಲ್ಲಿ ಕಂಪ್ಯೂಟರ್ ಶಿಕ್ಷಣ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗುತ್ತಾ ಇದೆ. ಆನಿಮೇಶನ್, ಗ್ರಾಫಿಕ್ಸ್ ಇತ್ಯಾದಿ ರಂಗಗಳಲ್ಲಿ ಹೊಸ ಹೊಸ ಸಂಶೋಧನೆಗಳು ನಿರಂತರವಾಗಿ ಅನಾವರಣಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಈ ಆನಿಮೇಶನ್ ತರಬೇತಿ ಅವರ ವಿಕಾಸಕ್ಕೆ ದಾರಿದೀಪವಾಗಲಿ" ಎಂದು ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಜಯದೇವ ಖಂಡಿಗೆ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿರುವ ನಾಲ್ಕು ದಿನಗಳ ‘ಆಂಟ್ಸ್ ಆನಿಮೇಶನ್’ ತರಬೇತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ನೀರ್ಚಾಲಿನ ಸೈನೇಜ್ ಇಂಡಸ್ಟ್ರೀಸ್ ಸಂಸ್ಥೆಯ ಮಾಲಕ ಗಣೇಶ್ ಕಿರಣ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಆನಿಮೇಶನ್ ಸಾಧ್ಯತೆಗಳ ಕುರಿತು ಮಾಹಿತಿ ನೀಡಿದರು. ಶಾಲಾ ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಸಂಯೋಜಕ ಎಚ್.ಸೂರ್ಯನಾರಾಯಣ ಪ್ರಾಸ್ತಾವಿಕ ಭಾಷಣ ಮಾಡಿದರು.
ವಿದ್ಯಾರ್ಥಿಗಳಾದ ಸುಬ್ರಹ್ಮಣ್ಯ ಪ್ರಸಾದ.ಕೆ ಸ್ವಾಗತಿಸಿ ಮೇಘನಾ ವಂದಿಸಿದರು. ಶಾಲಾ ವಿದ್ಯಾರ್ಥಿ ನಾಯಕಿ ಶಾಂತಿ.ಕೆ ಕಾರ್ಯಕ್ರಮ ನಿರೂಪಿಸಿದರು. ನಾಲ್ಕು ದಿನಗಳ ಈ ತರಬೇತಿಯಲ್ಲಿ ಎಂಟು ಮತ್ತು ಒಂಬತ್ತನೇ ತರಗತಿಯ ಇಪ್ಪತ್ತು ಮಂದಿ ಆನಿಮೇಶನ್ ತರಬೇತಿ ಪಡೆಯಲಿದ್ದಾರೆ. ಸಂಪನ್ಮೂಲ ವಿದ್ಯಾರ್ಥಿಗಳಾಗಿ ಒಂಬತ್ತನೇ ತರಗತಿಯ ಮೇಘನಾ, ಹತ್ತನೇ ತರಗತಿಯ ಶಾಂತಿ.ಕೆ, ವರ್ಷ.ಕೆ, ಸುಬ್ರಹ್ಮಣ್ಯ ಪ್ರಸಾದ.ಕೆ, ಶಶಾಂಕ ಶರ್ಮ.ಎಸ್, ಅಜಿತ್. ವಿ. ಶರ್ಮ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳೇ ತರಬೇತಿ ನೀಡುವುದು ಈ ಕಾರ್ಯಕ್ರಮದ ವಿಶೇಷತೆ.
19 October 2011
ಮದಕಗಳನ್ನು ಉಳಿಸಿ: ಹರೀಶ್ ಹಳೆಮನೆ
“ಮದಕಗಳ ಮಧ್ಯಭಾಗದಲ್ಲಿರುವ ಜಾಗದಲ್ಲಿ ಸುತ್ತಲಿನ ಎತ್ತರದ ನೆಲದಿಂದ ಹರಿದುಬಂದ ಮಳೆನೀರು ಸಂಗ್ರಹವಾಗಿ ನಿಲ್ಲುತ್ತದೆ. ನಿಧಾನವಾಗಿ ಭೂಮಿಗೆ ಇಂಗುತ್ತದೆ. ಆದ ಕಾರಣ ಮದಕವನ್ನು ಒಂದು ವಿಶಾಲವಾದ ಇಂಗುಕೊಳವೆಂದೇ ಹೇಳಬಹುದು. ಇದರ ಪರಿಣಾಮ ಹತ್ತಿರದಲ್ಲಿರುವ ಕೆರೆ, ಬಾವಿಗಳಲ್ಲಿ ನೀರು ಒರತೆಯ ರೂಪದಲ್ಲಿ ಕಾಣಸಿಗುತ್ತದೆ. ಕೆಲವು ಕಡೆ ಕೆರೆಗಳನ್ನೂ ಮದಕಗಳೆಂದು ಹೇಳುತ್ತಾರೆ. ಸುರಂಗದ ನೀರಿನ ಸಂಗ್ರಹಕ್ಕೆಂದು ಮಾಡಿದ ಕೆರೆಗಳನ್ನು ಮದಕಗಳೆನ್ನುವುದು ವಾಡಿಕೆ. ಕೆರೆಗಳಿಂದ ನೀರನ್ನು ನೇರವಾಗಿ ನೀರಾವರಿಗಾಗಿ ಬಳಸುತ್ತಾರೆ. ಮದಕಗಳಿಂದ ನೇರವಾಗಿ ನೀರೆತ್ತುವ ಉದಾಹರಣೆಗಳು ಇಲ್ಲ. ಮದಕಗಳಿಂದ ಬರುವ ಒರತೆ ನೀರನ್ನು ಮಾತ್ರ ಕೃಷಿಗೆ ಬಳಸುತ್ತಾರೆ. ಆದ್ದರಿಂದ ಮದಕಗಳು ಹೆಚ್ಚು ಸುಸ್ಥಿರವಾದ ಜಲಮೂಲಗಳಾಗಿವೆ. ಮದಕಗಳ ಕೆಳಭಾಗದಲ್ಲಿರುವ ಕೃಷಿಭೂಮಿಗಳಿಗೆ ಪಂಪಿನ ಮೂಲಕ ನೀರಿನ ಹಾಯಿಸುವಿಕೆಯ ಪ್ರಮಾಣ ಕಡಿಮೆ ಸಾಕಾಗುತ್ತದೆ. ಇದರಿಂದಾಗಿ ನೀರಿನ ಶೋಷಣೆಯನ್ನು ಕಡಿಮೆ ಮಾಡಬಹುದು ಹಾಗೂ ಇತ್ತೀಚಿನ ದಿನಗಳಲ್ಲಿ ಹದಗೆಡುತ್ತಿರುವ ಮಾನವ ಸಂಬಂಧಗಳನ್ನು ಸುಧಾರಿಸಬಹುದು. ಎಂದು ಹವ್ಯಾಸಿ ಪತ್ರಕರ್ತ ಹರೀಶ್ ಹಳೆಮನೆ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಜರಗಿದ “ಮದಕ-ಸಂವಾದ” ಕಾರ್ಯಕ್ರಮದಲ್ಲಿ ಸ್ಲೈಡ್ ಪ್ರದರ್ಶನ ಸಹಿತ ಉಪನ್ಯಾಸವನ್ನು ನೀಡುತ್ತಾ ಮಾತನಾಡುತ್ತಿದ್ದರು.ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಂಸ್ಕೃತ ಶಿಕ್ಷಕ ಎಸ್.ವಿ.ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಾದ ಕಾವ್ಯ ಸ್ವಾಗತಿಸಿ ಚೇತನ್‌ಕೃಷ್ಣ.ಸಿ ವಂದಿಸಿದರು. ಶ್ರವಣ್. ಬಿ ಕಾರ್ಯಕ್ರಮ ನಿರೂಪಿಸಿದರು.
12 October 2011
ಗೌತಮ್ ಬಿಡಿಸಿದ ಚಿತ್ರ
10 October 2011
ಶುಭಾಶಯಗಳು, ಪೂರ್ವ ವಿದ್ಯಾರ್ಥಿಗಳಿಗೆ...
08 October 2011
ಶ್ರೀ ಶಾರದಾ ಪೂಜಾ - ೨೦೧೧
03 October 2011
ಆದರ್ಶ ಬಿಡಿಸಿದ ಚಿತ್ರ
20 September 2011
ರಸ್ತೆ ಸುರಕ್ಷಾ ಜಾಗೃತಿ ಕಾರ್ಯಕ್ರಮ
“ಮಾನವನ ಜೀವ ಅತ್ಯಂತ ಅಮೂಲ್ಯವಾದುದು. ದಿನವೊಂದರಲ್ಲಿ ರಸ್ತೆ ಅಪಘಾತಗಳಿಂದಾಗಿ ಇಹಲೋಕವನ್ನು ತ್ಯಜಿಸುತ್ತಿರುವ, ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದವರನ್ನು ಗಮನಿಸುವಾಗ, ನಾವು ರಸ್ತೆ ನಿಯಮಗಳ ಬಗ್ಗೆ ಎಷ್ಟು ಜಾಗೃತರಾಗಿರಬೇಕೆಂಬುದು ಅರಿವಾಗುತ್ತದೆ. ರಸ್ತೆ ನಿಯಮಗಳು ಕೇವಲ ವಾಹನ ಚಾಲಕರಿಗೆ ಮಾತ್ರವಲ್ಲ, ಪಾದಚಾರಿಗಳಿಗೂ ಅನ್ವಯವಾಗುತ್ತದೆ. ರಸ್ತೆಯನ್ನು ದಾಟುವಾಗ ಎಡಬಲಗಳನ್ನು ಸ್ಪಷ್ಟವಾಗಿ ವೀಕ್ಷಿಸಿ, ಯಾವುದೇ ವಾಹನಗಳು ಸಂಚರಿಸುತ್ತಿಲ್ಲವೆಂಬುದನ್ನು ಗಮನಿಸಿಯೇ ದಾಟಬೇಕು. ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಧರಿಸಬೇಕು. ವಾಹನ ಸವಾರರು ಸಡಿಲವಾದ ಉಡುಪುಗಳನ್ನು ಧರಿಸಬಾರದು. ರಾತ್ರಿಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರಿಗೆ ಬಿಳಿ ಬಣ್ಣದ ಉಡುಪುಗಳು ಉತ್ತಮ. ಕಾರು, ಜೀಪು ಮುಂತಾದ ವಾಹನಗಳಲ್ಲಿ ಚಲಿಸುವವರು ಸೀಟ್ ಬೆಲ್ಟ್ ಧರಿಸಿಕೊಳ್ಳಬೇಕು” ಎಂದು ಕಾಸರಗೋಡು ಜಿಲ್ಲಾ ಅಸಿಸ್ಟೆಂಟ್ ಮೋಟಾರ್ ವೆಹಿಕಲ್ ಇನ್‌ಸ್ಪೆಕ್ಟರ್ ರಾಜೀವನ್ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ‘ರಸ್ತೆ ಸುರಕ್ಷಾ ಜಾಗೃತಿ ಕಾರ್ಯಕ್ರಮ’ದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ ಸ್ಲೈಡ್ ಪ್ರದರ್ಶನದ ಮೂಲಕ ವಿವರಣೆಗಳನ್ನು ನೀಡುತ್ತಾ ಮಾತನಾಡುತ್ತಿದ್ದರು.ಕವನ - ಪ್ರಕೃತಿಯ ಸೌಂದರ್ಯ
ಕೇಳಲು ಬಲು ಮಧುರ
ತಿಳಿಯಾದ ಜಲಧಾರೆ ಹರಿಯುತಿರೆ
ಕಲಕಲ ನಾದದಲಿ
ಬಣ್ಣಬಣ್ಣದ ಚಿಟ್ಟೆಗಳು ಹಾರಾಡುವವು
ಮಕರಂದವ ಹೀರುತಲಿ
ಈ ನಮ್ಮ ಪ್ರಕೃತಿ ಎಷ್ಟೊಂದು ಸುಂದರ
ಇದನು ಸವಿದಿಹನು ಆ ಬೆಳ್ಳಿಯ ಚಂದಿರ
02 September 2011
ಓಣಂ ಭೋಜನ
ಇಂದಿನಿಂದ ಓಣಂ ರಜೆ ಆರಂಭ. ಮುಂದಿನ ವಾರ ಕೇರಳದಾದ್ಯಂತ ಓಣಂ ಹಬ್ಬದ ಸಡಗರ. ಈ ಹಿನ್ನೆಲೆಯಲ್ಲಿ ನಮ್ಮ ಶಾಲಾ ನೂತನ ವ್ಯವಸ್ಥಾಪಕ ಶ್ರೀ ಜಯದೇವ ಖಂಡಿಗೆ ಮತ್ತು ಶಾಲಾ ಶಿಕ್ಷಕಿ ವಾಣಿ.ಪಿ.ಎಸ್ ಅವರಿಂದ ವಿದ್ಯಾರ್ಥಿಗಳಿಗೆ ಓಣಂ ಭೋಜನದ ಕೊಡುಗೆ. ಜಯದೇವ ಖಂಡಿಗೆಯವರು ಇಂದಿನ ಓಣಂ ಭೋಜನ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸಹಭೋಜನದ ಸವಿಯನ್ನು ನೀಡಿದರು. ಧನ್ಯವಾದಗಳು, ನಿಮಗೆಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು...
26 August 2011
ರಾಜ್ಯ ಪುರಸ್ಕಾರ ಗೈಡ್

ರಾಜ್ಯ ಪುರಸ್ಕಾರ ಸ್ಕೌಟ್
21 August 2011
ಶ್ರೀಕೃಷ್ಣ ಜಯಂತಿ
ವಿದ್ಯೆ, ತಪಸ್ಸು, ಧ್ಯಾನ, ಜ್ಞಾನ, ಶೀಲ, ಗುಣ, ಧರ್ಮ ಈ ಏಳು ಗುಣಗಳು ಇಲ್ಲದಿರುವವರು ಭೂಮಿಗೆ ಭಾರವಾಗಿರುವ ಮನುಷ್ಯರೂಪದ ಮೃಗಗಳು. ಉತ್ತಮ ಮನಸ್ಸು ನಮ್ಮ ದೇಹವನ್ನು ಶ್ರೀಮಂತವಾಗಿಸುತ್ತವೆ. ಶುದ್ಧ ಮನಸ್ಸು ನಮ್ಮ ಆತ್ಮೀಯ ಗೆಳೆಯ. ಮನಸ್ಸನ್ನು ತಿದ್ದುವ ಕಾರ್ಯ ನಿತ್ಯ ನಿರಂತರವಾಗಬೇಕು. ಹಾಗಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ, ಜನ್ಮ ಸಾರ್ಥಕವಾಗಲು ಸಾಧ್ಯ" ಎಂದು ಪೆರ್ಲ ಶ್ರೀಸತ್ಯನಾರಾಯಣ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಆರ್. ನರಸಿಂಹ ಭಟ್ ಹೇಳಿದರು. ಅವರು ಇಂದು ಪೆರಡಾಲ ಮಹಾಜನ ವಿದ್ಯಾಭಿವರ್ಧಕ ಸಂಘದ ‘ವಿದ್ಯೋದಯ ಸಭಾ’ ಆಶ್ರಯದಲ್ಲಿ ನಮ್ಮ ಶಾಲೆಗಳಲ್ಲಿ ಜರಗಿದ ‘ಶ್ರೀಕೃಷ್ಣ ಜಯಂತಿ’ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 
ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಹಾಲಿಂಗ ಪಾಟಾಳಿ ಮುಖ್ಯ ಅತಿಥಿಗಳಾಗಿದ್ದರು. ಜನ್ಮಾಷ್ಟಮಿಯ ಅಂಗವಾಗಿ ಜರಗಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ವಿದ್ಯಾರ್ಥಿ ನಾಯಕಿ ಶಾಂತಿ.ಕೆ ವರದಿ ವಾಚಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜಯದೇವ ಖಂಡಿಗೆ ಸ್ವಾಗತಿಸಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ವಂದಿಸಿದರು. ಕಾರ್ಯಕ್ರಮದ ಸಂಚಾಲಕ, ಶಿಕ್ಷಕ ಚಂದ್ರಶೇಖರ ರೈ ಕಾರ್ಯಕ್ರಮ ನಿರೂಪಿಸಿದರು.
ಮನರಂಜನಾ ಕಾರ್ಯಕ್ರಮದ ಅಂಗವಾಗಿ ಕೀರ್ತನ ಪ್ರವೀಣ ಶ್ರೀ ಬೆಳ್ಳೂರು ಕಮಲ ತನಯ ಅವರಿಂದ ‘ಭಕ್ತ ಕನಕದಾಸ’ ಹರಿಕಥೆ ಕಾರ್ಯಕ್ರಮ ಜರಗಿತು.
17 August 2011
ನೀರ್ಚಾಲು ಮದಕಕ್ಕೆ ಪ್ರಯಾಣ
16 August 2011
ಹೂ ರಂಗವಲ್ಲಿ...
15 August 2011
ಸ್ವಾತಂತ್ರ್ಯ ಯಾತ್ರೆ
“ಹಿರಿಯರ ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯವನ್ನು ನಾವು ಸಂರಕ್ಷಿಸಬೇಕಾಗಿದೆ. ಇಂದು ಭಾರತ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರು ನಿಸ್ವಾರ್ಥವಾಗಿ ದೇಶಕ್ಕಾಗಿ ದುಡಿದರೆ ರಾಜಕಾರಣಿಗಳು ಸ್ವಂತ ಸಂಪತ್ತಿಗಾಗಿ ಹವಣಿಸುತ್ತಿದ್ದಾರೆ. ನಮ್ಮ ಸಂವಿಧಾನ ಭಾರತದ ಪ್ರಜಾಪ್ರಭುತ್ವಕ್ಕೆ ಆಧಾರ ಸ್ತಂಭವಾಗಿದೆ. ಆಡಳಿತಕ್ಕೆ ಚೌಕಟ್ಟು ನೀಡಿದರೂ ಇಂದು ನಡೆಯುತ್ತಿರುವ ಸಂವಿಧಾನಾತೀತವಾದ ಚಟುವಟಿಕೆಗಳು ದೇಶಕ್ಕೆ ಸವಾಲಾಗಿ ಪರಿಣಮಿಸುತ್ತಿದೆ. ಸ್ವಾತಂತ್ರ್ಯದ ಸಂದೇಶವನ್ನು ಉಳಿಸಿ ದೇಶದ ಹಿತಕ್ಕಾಗಿ ನಾವು ಶ್ರಮಿಸಬೇಕಾಗಿದೆ" ಎಂದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಚಂದ್ರಶೇಖರ ರೈ ಹೇಳಿದರು. ಅವರು ಇಂದು ನಮ್ಮ ಶಾಲೆಗಳಲ್ಲಿ ಜರಗಿದ ಸ್ವಾತಂತ್ರ್ಯ ಯಾತ್ರೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯ ಯು. ರವಿಕೃಷ್ಣ ಅಧ್ಯಕ್ಷತೆ ವಹಿಸಿದರು. ಕಿರಿಯ ಪ್ರಾಥಮಿಕ ಶಾಲಾ ವಿಭಾಗದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸೀತಾರಾಮ ಆಚಾರ್ಯ ಶುಭಾಶಯಗಳನ್ನು ಹೇಳಿದರು. ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿ ನಾಯಕಿ ಶಾಂತಿ.ಕೆ ಸ್ವಾಗತಿಸಿದರು. ಶಿಕ್ಷಕ ಎಂ.ಸೂರ್ಯನಾರಾಯಣ ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ರೂಪಿಸಿದ ಸ್ವಾತಂತ್ರ್ಯ ವಿಶೇಷಾಂಕವನ್ನು ಬಿಡುಗಡೆಗೊಳಿಸಲಾಯಿತು. ವಿದ್ಯಾರ್ಥಿಗಳಿಂದ ನೀರ್ಚಾಲಿನಲ್ಲಿ ಸ್ವಾತಂತ್ರ್ಯ ಮೆರವಣಿಗೆ ನಡೆಯಿತು.
11 August 2011
ಚಿನ್ನದ ಕುಸುರಿ ಕಲೆಯ ಕಡೆಗೆ...
05 August 2011
ಇಂದು ಶಾಲಾ ಚುನಾವಣೆ...

ನಮ್ಮ ಶಾಲಾ ವಿದ್ಯಾರ್ಥಿ ನಾಯಕನ ಆಯ್ಕೆಗಾಗಿ ಇಂದು ಚುನಾವಣೆ ನಡೆಯಿತು. ಎಲ್ಲಾ ತರಗತಿಯ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ಬಂದು ತಮ್ಮ ಅಮೂಲ್ಯ ಮತಗಳನ್ನು ಚಲಾಯಿಸಿದರು. ಶಾಲಾ ಉಪನಾಯಕನ ಸ್ಥಾನಕ್ಕೆ ೯ಬಿ ತರಗತಿಯ ಸುಚಿತ್ರಾ ಅವಿರೋಧ ಆಯ್ಕೆಯಾಗಿದ್ದಳು. ಶಾಲಾ ವಿದ್ಯಾರ್ಥಿ ನಾಯಕ ಮತ್ತು ‘ಗಾಯತ್ರಿ’ ಭಿತ್ತಿಪತ್ರಿಕೆಯ ಸಂಪಾದಕ ಸ್ಥಾನಕ್ಕೆ ಸ್ಪರ್ಧೆ ನಡೆದಿತ್ತು. ಈಗ ಮತ ಎಣಿಕೆ ಪೂರ್ತಿಗೊಂಡಿದ್ದು ಶಾಲಾ ವಿದ್ಯಾರ್ಥಿ ನಾಯಕಿಯಾಗಿ ೧೦ಬಿ ತರಗತಿಯ ಶಾಂತಿ.ಕೆ ಮತ್ತು ‘ಗಾಯತ್ರಿ’ ಭಿತ್ತಿ ಪತ್ರಿಕೆಯ ಸಂಪಾದಕನಾಗಿ ೧೦ಎ ತರಗತಿಯ ಆಶಿಕ್. ಜಿ ಆಯ್ಕೆಯಾಗಿದ್ದಾರೆ. ಶುಭಾಶಯಗಳು...
29 July 2011
ಕಡೆಯುವ ಕಲ್ಲು ತಯಾರಿ ಹೇಗೆ..?
22 July 2011
‘ಚೈತನ್ಯ ಕ್ಲಬ್’ ಉದ್ಘಾಟನೆ
"ಜಗತ್ತು ಆಧುನಿಕತೆಯ ಕಡೆಗೆ ಸಾಗುತ್ತಿರುವಂತೆ ವಿದ್ಯುತ್ತಿನ ಉಪಯೋಗ ವಿಪರೀತವಾಗಿ ಹೆಚ್ಚುತ್ತಿದೆ. ಒಂದು ಯೂನಿಟ್ ವಿದ್ಯುತ್ತಿನ ಉಳಿತಾಯ ಮೂರು ಯೂನಿಟ್ ವಿದ್ಯುತ್ ಉತ್ಪಾದನೆಗೆ ಸಮ ಎಂಬ ಸ್ಥಿತಿಗೆ ನಾವು ತಲಪಿದ್ದೇವೆ. ಹಾಗಾಗಿ ಮನೆಮನಗಳಲ್ಲಿ ಚೈತನ್ಯದ ಉಳಿತಾಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೇರಳ ವಿದ್ಯುತ್ ಇಲಾಖೆಯು ವಿದ್ಯಾಭ್ಯಾಸ ಇಲಾಖೆಯ ಸಹಯೋಗದಲ್ಲಿ ವಿದ್ಯಾರ್ಥಿಗಳಲ್ಲಿ ಚೈತನ್ಯದ ಸಂರಕ್ಷಣೆಯ ಕಾರ್ಯಕ್ರಮವನ್ನು ಆಯೋಜಿಸಿದೆ. ವಿದ್ಯುತ್ತಿನ ದುರ್ಬಳಕೆಯನ್ನು ತಡೆಗಟ್ಟಿ ನಾಳೆಗಾಗಿ ಒಂದಿಷ್ಟು ಚೈತನ್ಯ ಉಳಿಸೋಣ" ಎಂದು ಕೇರಳ ರಾಜ್ಯ ವಿದ್ಯುತ್ ಮಂಡಳಿಯ ಬದಿಯಡ್ಕ ವಿಭಾಗದ ಸಹಾಯಕ ಇಂಜಿನಿಯರ್ ರಾಜಗೋಪಾಲ.ಕೆ.ಬಿ ಅಭಿಪ್ರಾಯಪಟ್ಟರು. ಅವರು ಇಂದು ನಮ್ಮ ಶಾಲೆಯಲ್ಲಿ ಕೇರಳ ಸರಕಾರದ ‘ನಾಳೆಗಾಗಿ ಚೈತನ್ಯ’ ಯೋಜನೆಯ ಅಂಗವಾಗಿ ಆರಂಭವಾದ ‘ಚೈತನ್ಯ ಕ್ಲಬ್’ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅಧ್ಯಾಪಕರಾದ ಎಸ್.ವಿ.ಭಟ್ ಮತ್ತು ಶಂಕರನಾರಾಯಣ ಶರ್ಮ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶಾಂತಿ.ಕೆ ಸ್ವಾಗತಿಸಿ, ಶಶಾಂಕ ಶರ್ಮ.ಎಸ್ ವಂದಿಸಿದರು. ವರ್ಷಾ.ಕೆ ಕಾರ್ಯಕ್ರಮ ನಿರೂಪಿಸಿದರು. ವಿದ್ಯುತ್ ಉಳಿತಾಯದ ಮಹತ್ವವನ್ನು ವಿವರಿಸುವ ಸ್ಲೈಡ್ ಪ್ರದರ್ಶನ ನಡೆಸಲಾಯಿತು. ವಿದ್ಯುತ್ ಉತ್ಪಾದನೆ ಮತ್ತು ಪ್ರೇಷಣೆಯ ಹಂತಗಳ ಬಗ್ಗೆ ವಿದ್ಯಾರ್ಥಿಗಳು ತಮ್ಮ ಸಂಶಯಗಳನ್ನು ಈ ಸಂದರ್ಭಲ್ಲಿ ಬಗೆಹರಿಸಿಕೊಂಡರು.
19 July 2011
ಮತ್ತೆ ಸಿ ಪಿ ಸಿ ಆರ್ ಐ ಪ್ರವಾಸ...
ನಮ್ಮ ವಾರ್ಷಿಕ ಚಟುವಟಿಕೆಗಳ ಭಾಗವಾಗಿ ಕಾಸರಗೋಡಿನಲ್ಲಿರುವ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರಕ್ಕೆ ಪ್ರವಾಸ ಹೋಗಿದ್ದೆವು ಮೊನ್ನೆ ಶನಿವಾರ ಜುಲೈ ೧೬ಕ್ಕೆ. ಬಡ್ಡಿಂಗ್, ಗ್ರಾಫ್ಟಿಂಗ್, ಎರೆಹುಳ ಗೊಬ್ಬರ ತಯಾರಿ ಇತ್ಯಾದಿಗಳನ್ನು ನೋಡಿ ಹೊಸ ಮಾಹಿತಿ ತಿಳಿದು ಬಂದಿದ್ದೇವೆ. ಇದು ನಮ್ಮ ವಾರ್ಷಿಕ ಚಟುವಟಿಕೆಗಳಾದರೂ ವಿದ್ಯಾರ್ಥಿಗಳಿಗೆ ಹೊಸ ಅನುಭವ ಎಂಬುದರಲ್ಲಿ ಸಂಶಯವಿಲ್ಲ.
08 July 2011
ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ವಾರ್ಷಿಕ ಉದ್ಘಾಟನೆ
ನಮ್ಮ ಶಾಲಾ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ವಾರ್ಷಿಕ ಉದ್ಘಾಟನೆಯನ್ನು ಶಾಲಾ ಸಂಸ್ಕೃತ ಅಧ್ಯಾಪಕರಾದ ಶ್ರೀಯುತ ಎಸ್.ವಿ.ಭಟ್ ಇಂದು ಮಧ್ಯಾಹ್ನ ನೆರವೇರಿಸಿದರು. ಈ ಸಂದರ್ಭದಲ್ಲಿ ಸಭಾಧ್ಯಕ್ಷತೆ ವಹಿಸಿದ ದೈಹಿಕ ಶಿಕ್ಷಕ ಶ್ರೀ ಎಂ.ಸೂರ್ಯನಾರಾಯಣ ವಿದ್ಯಾರ್ಥಿಗಳ ಹಸ್ತಪ್ರತಿ ‘ಗಾಯತ್ರಿ’ ಯನ್ನು ಬಿಡುಗಡೆಗೊಳಿಸಿದರು. ಕನ್ನಡ ಶಿಕ್ಷಕಿ ಶ್ರೀಮತಿ ವಾಣಿ. ಪಿ.ಎಸ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಕಾರ್ಯಕ್ರಮದ ಅಂಗವಾಗಿ ಮನರಂಜನಾ ಕಾರ್ಯಕ್ರಮಗಳೂ ಜರಗಿದವು.ರಕ್ಷಕ ಶಿಕ್ಷಕ ಸಂಘ
01 July 2011
ಶೇಖರಕಾನ...
28 June 2011
ಆರ್ಟ್ಸ್ ಕ್ಲಬ್...
ನಮ್ಮ ಶಾಲಾ ಚಿತ್ರಕಲಾ ಅಧ್ಯಾಪಕರ ಆಸಕ್ತಿಯಲ್ಲಿ ಗರಿಗೆದರಿದ ಸಂಘ ಶಾಲಾ ಆರ್ಟ್ಸ್ ಕ್ಲಬ್. ವಿದ್ಯಾರ್ಥಿಗಳಿಗೂ ಈ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸುವುದು ಖುಷಿಯ ವಿಚಾರ. ಮೊನ್ನೆ ಮಾದಕ ದ್ರವ್ಯ ವಿರೋಧಿ ದಿನ ಸರಿದು ಹೋಗಿರುವುದು ನಿಮಗೆಲ್ಲ ತಿಳಿದ ವಿಚಾರ. ಆರ್ಟ್ಸ್ ಕ್ಲಬ್ ಉದ್ಘಾಟನೆಯ ಜೊತೆ ಮಾದಕ ದ್ರವ್ಯ ವಿರೋಧಿ ಪೋಸ್ಟರ್ ರಚನಾ ಸ್ಪರ್ಧೆಯೂ ಜರಗಿತು. ಆ ಸಂದರ್ಭದ ಒಂದು ಝಲಕ್ ಇಲ್ಲಿದೆ...
24 June 2011
02 June 2011
ಶಾಲಾರಂಭ...
06 May 2011
ಶುಭಾಶಯಗಳು...
29 April 2011
ರಿಸಲ್ಟ್ ಬಂತು, 93%...
31 March 2011
ಶಿಕ್ಷಕಿ ವೈ.ಪರಮೇಶ್ವರಿ ಅವರಿಗೆ ಭಾವಪೂರ್ಣ ನಿವೃತ್ತಿ...
09 March 2011
ಪರೀಕ್ಷೆ, ಪರೀಕ್ಷೆ...
19 February 2011
ಗುರುವಂದನೆ
“ಭಜನೆಯು ವಿದ್ಯಾರ್ಥಿಗಳ ಭಾವೋದ್ವೇಗವನ್ನು ನಿಯಂತ್ರಿಸಲು ಮತ್ತು ಏಕಾಗ್ರತೆಯನ್ನು ಹೆಚ್ಚಿಸುವ ಒಂದು ಮಾಧ್ಯಮವಾಗಿದೆ. ಈ ನಿಟ್ಟಿನಲ್ಲಿ ಪ್ರತಿಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ರಾಮಕೃಷ್ಣ ಕಾಟುಕುಕ್ಕೆಯವರ ಪ್ರಯತ್ನ ಸ್ತುತ್ಯರ್ಹವಾಗಿದೆ” ಎಂದು ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಅಭಿಪ್ರಾಯಪಟ್ಟರು. ಅವರು ನಿನ್ನೆ ನಮ್ಮ ಶಾಲಾ ಆರ್ಟ್ಸ್ ಕ್ಲಬ್ ಆಶ್ರಯದಲ್ಲಿ ನಡೆಯುತ್ತಿದ್ದ ‘ದಾಸವಾಣಿ ಕೀರ್ತನಾ ತರಗತಿ’ಗಳ ಸಮಾರೋಪ ಮತ್ತು ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕಳೆದ ಆರು ತಿಂಗಳಿನಿಂದ ತರಗತಿಗಳನ್ನು ನಡೆಸಿಕೊಟ್ಟ ಗಾಯಕ ರಾಮಕೃಷ್ಣ ಕಾಟುಕುಕ್ಕೆಯವರನ್ನು ವಿದ್ಯಾರ್ಥಿಗಳು ಮತ್ತು ಹಿರಿಯರು ಶಾಲು,ಫಲ,ಸ್ಮರಣಿಕೆ ನೀಡಿ ವಂದಿಸಿದರು. ಈ ಸಂದರ್ಭದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದ ರಾಮಕೃಷ್ಣ ಕಾಟುಕುಕ್ಕೆಯವರು “ವಿದ್ಯಾರ್ಥಿಗಳ ಕಂಠದಿಂದ ದೇವರ ನಾಮವು ಮೊಳಗಿದರೆ ಅದೇ ನನಗೆ ಶ್ರೀನಿವಾಸನ ಸೇವೆ, ದೊರೆಯುವ ಸಂತೃಪ್ತಿ" ಎಂದು ಹೇಳಿದರು.
ಹಿರಿಯ ಅಂಕಣಕಾರ ಎಂ.ವಿ.ಭಟ್ ಮಧುರಂಗಾನ ಮತ್ತು ಶಾಲಾ ಆಡಳಿತ ಮಂಡಳಿಯ ಜಯದೇವ ಖಂಡಿಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಿಕ್ಷಕಿ ವಾಣಿ. ಪಿ.ಎಸ್ ಸ್ವಾಗತಿಸಿ ಚಿತ್ರಕಲಾ ಅಧ್ಯಾಪಕ ಗೋವಿಂದ ಶರ್ಮ ವಂದಿಸಿದರು.
04 February 2011
ಶಾಲಾ ವಾರ್ಷಿಕೋತ್ಸವ
“ಖಂಡಿಗೆ ಮನೆತನ ಕಾಸರಗೋಡಿನ ಬೆಳವಣಿಗೆಯಲ್ಲಿ ನೀಡಿದ ಸೇವೆ ಅನನ್ಯ. ನೂರು ವರ್ಷಗಳ ಹಿಂದೆಯೇ ನೀರ್ಚಾಲಿನಲ್ಲಿ ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸಿ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುವಂತೆ ಖಂಡಿಗೆಯವರು ಪ್ರಯತ್ನಿಸಿದ್ದರಿಂದಾಗಿ ನಾಡಿಗೊಂದು ಉತ್ತಮ ವಿದ್ಯಾಸಂಸ್ಥೆ ದೊರೆಯಿತು. ವಿದ್ಯಾರ್ಥಿಗಳ ಬಹುಮುಖಿ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ ಶಾಲಾ ವಾರ್ಷಿಕೋತ್ಸವಗಳು ಉತ್ತಮ ವೇದಿಕೆಯಾಗಿವೆ. ಅವರ ಬೆಳವಣಿಗೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಶಾಲಾ ಕಾರ್ಯಕ್ರಮಗಳು ನಡೆಯುತ್ತವೆ. ಹೆಸರಾಂತ ಮಹಾಜನ ವಿದ್ಯಾಸಂಸ್ಥೆ ಶತಮಾನೋತ್ಸವದ ಹೊಸ್ತಿಲಿನಲ್ಲಿದೆ. ನಾಡಿನ ಹಿರಿಯ ಸಂಸ್ಥೆಯ ಶತಮಾನೋತ್ಸವವನ್ನು ನಾವೆಲ್ಲ ಸಂಭ್ರಮದಿಂದ ಆಚರಿಸಬೇಕಾಗಿದೆ.”ಎಂದು ಮುಗು ಸೇವಾ ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ನಾರಾಯಣ ನಂಬ್ಯಾರ್ ಅಭಿಪ್ರಾಯಪಟ್ಟರು. ಅವರು ಇಂದು ಜರಗಿದ ನಮ್ಮ ಶಾಲಾ ವರ್ಧಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ನಟರಾಜ ರಾವ್ ಅಧ್ಯಕ್ಷತೆ ವಹಿಸಿದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್, ಶಾಲಾ ವ್ಯವಸ್ಥಾಪಕ ಖಂಡಿಗೆ ಶಾಮ ಭಟ್, ಕಿರಿಯ ಪ್ರಾಥಮಿಕ ಶಾಲಾ ಮಾತೃ ಸಂಘದ ಅಧ್ಯಕ್ಷೆ ಸುನೀತಾ ಶುಭಹಾರೈಸಿದರು.
ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರವಿಕೃಷ್ಣ. ಯು ವರದಿ ವಾಚಿಸಿದರು. ಶಾಲಾ ಸಂಸ್ಕೃತ ಅಧ್ಯಾಪಕ ಎಸ್. ವಿ. ಭಟ್ ಸ್ವಾಗತಿಸಿದರು. ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಪಿ.ಗೋವಿಂದ ಭಟ್ ವಂದಿಸಿದರು. ಶಾರೀರಿಕ ಶಿಕ್ಷಣ ಅಧ್ಯಾಪಕ ಎಂ.ಸೂರ್ಯನಾರಾಯಣ ಕಾರ್ಯಕ್ರಮವನ್ನು ನಿರೂಪಿಸಿದರು. ಬೆಳಗ್ಗೆ ಮಹಾಜನ ಹಳೆ ವಿದ್ಯಾರ್ಥಿ ಸಂಘದ ಮಹಾಸಭೆಯನ್ನೂ ಏರ್ಪಡಿಸಲಾಗಿತ್ತು.
03 February 2011
ನಾಳೆ ಶಾಲಾ ವಾರ್ಷಿಕೋತ್ಸವ
ತಲಪಿದ ಪುಸ್ತಕಗಳು: ವಿದ್ಯಾರ್ಥಿಗಳಲ್ಲಿ ಸಂತಸ
25 January 2011
ಸಹಕಲಿಕಾ ಶಿಬಿರ ಆರಂಭ

ಶಾಲೆ, ರಾತ್ರಿಯ ಪ್ರಶಾಂತ ವಾತಾವರಣದಲ್ಲಿಯೂ ಚಿಲಿಪಿಲಿಗುಟ್ಟುತ್ತಿದೆ. ಶಾಲೆಯಲ್ಲಿ ಗೂಡುಕಟ್ಟಿದ ವಿದ್ಯಾರ್ಥಿಗಳು ಶಿಬಿರಾಗ್ನಿಯ ಮಜಾ ಅನುಭವಿಸುತ್ತಿದ್ದಾರೆ. ಇಂದು ಬೆಳಗ್ಗೆ ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ಉದ್ಘಾಟಿಸಿದ ಶಿಬಿರ ಸಂಪನ್ಮೂಲ ವ್ಯಕ್ತಿಗಳಾದ ಗುರುಪ್ರಸಾದ ರೈ ಮತ್ತು ತಂಡದವರ ನೇತೃತ್ವದಲ್ಲಿ ಚೆನ್ನಾಗಿ ನಡೆಯುತ್ತಿದೆ. ನೂರೈವತ್ತಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದಾರೆ. ಖುಷಿ ಇದೆ.24 January 2011
ನಾಳೆ ಸಹವಾಸ ಶಿಬಿರ
19 January 2011
ನಮಸ್ಕಾರ, ನಾವು ತೃತೀಯ ವರ್ಷಕ್ಕೆ ಕಾಲಿಡುತ್ತಿದ್ದೇವೆ...
ನಿಮಗೆಲ್ಲ ಈ ಸಂದರ್ಭದಲ್ಲಿ ನಮ್ಮ ಭಾವಪೂರ್ಣ ನಮನಗಳು. ನಮ್ಮನ್ನು ಈ ಹುಟ್ಟುಹಬ್ಬ ಸಂಭ್ರಮದ ತನಕ ಬೆಳೆಸಿದ ನಿಮಗೆ ನಾವು ಆಭಾರಿಗಳು. ಪ್ರೀತಿ ಇರಲಿ...
18 January 2011
ಶಾಲಾ ಪ್ರವಾಸ - ತಿರುವನಂತಪುರಕ್ಕೆ...
ಇಂದು ಸಾಯಂಕಾಲ ಹೊರಡುವ ಮಲಬಾರ್ ಎಕ್ಸ್‌ಪ್ರೆಸ್ ಟ್ರೈನಿನಲ್ಲಿ ನಮ್ಮ ಶಾಲೆಯ ೩೦ ಮಂದಿ ವಿದ್ಯಾರ್ಥಿಗಳು ಅಧ್ಯಾಪಕರೊಂದಿಗೆ ರಾಜ್ಯ ರಾಜಧಾನಿ ತಿರುವನಂತಪುರಕ್ಕೆ ಪ್ರವಾಸ ಹೊರಡುತ್ತಿದ್ದಾರೆ. ನಾಳೆ ಅಲ್ಲೆಲ್ಲ ಶ್ರೀಅನಂತಪದ್ಮನಾಭ ಸ್ವಾಮಿ ದೇವಸ್ಥಾನ, ವಿಧಾನಸಭೆ, ಶಂಖುಮುಖಂ, ಕೋವಳಂ, ಮ್ಯೂಸಿಯಂ ಸುತ್ತಾಡಿ ಬರಲಿದ್ದಾರೆ. ಅವರಿಗೆ ಶುಭ ಪ್ರಯಾಣವನ್ನು ಹಾರೈಸುತ್ತಿದ್ದೇವೆ.
01 January 2011
ರಜಾಕಾಲದ ಕಂಪ್ಯೂಟರ್ ತರಬೇತಿ ಸಮಾರೋಪ
“ಕೇರಳ ವಿದ್ಯಾಭ್ಯಾಸ ಇಲಾಖೆ ಕಂಪ್ಯೂಟರ್ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡುತ್ತಿದೆ. ಐಟಿ ಸ್ಕೂಲ್, ಪ್ರೋಜೆಕ್ಟ್ ವಿದ್ಯಾರ್ಥಿಗಳಿಗಾಗಿ ಗಣಕ ಯಂತ್ರದ ಆಧುನಿಕ ಮಾಹಿತಿಗಳನ್ನು ಒದಗಿಸುತ್ತಿದೆ. ಕಂಪ್ಯೂಟರ್ ರಂಗದಲ್ಲಿ ಆಗುತ್ತಿರುವ ಹೊಸ ಬೆಳವಣಿಗೆಗಳ ಕುರಿತಾದ ವಿವರಗಳನ್ನು ಹಂಚಿಕೊಳ್ಳುವುದಕ್ಕಾಗಿ ರಜಾಕಾಲದ ಈ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಪ್ರತೀ ಜಿಲ್ಲೆಯಲ್ಲೂ ಐದುಸಾವಿರ ಮಂದಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಂತಹ ಕಾರ್ಯವನ್ನು ಈ ಬಾರಿ ಏರ್ಪಡಿಸಲಾಗಿದೆ. ಈ ಮೂಲಕ ಕೇರಳ ರಾಜ್ಯದ ಎಪ್ಪತ್ತುಸಾವಿರ ಮಂದಿ ವಿದ್ಯಾರ್ಥಿಗಳು ಮಾತೃಭಾಷೆಯಲ್ಲಿ ಟೈಪ್ ಮಾಡುವುದು ಮತ್ತು ಇಂಟರ್‌ನೆಟ್ ಮೂಲಕ ವ್ಯವಹರಿಸಲು ಪ್ರಾಪ್ತರಾಗಲಿದ್ದಾರೆ” ಎಂದು ಕಾಸರಗೋಡು ಜಿಲ್ಲಾ ಮಾಸ್ಟರ್ ಟ್ರೈನರ್ ರಾಜೇಶ್ ಎಂ.ಪಿ ಹೇಳಿದರು. ಅವರು ನಮ್ಮ ಶಾಲೆಯಲ್ಲಿ ಕಳೆದ ಆರು ದಿನಗಳಿಂದ ನಡೆಯುತ್ತಿರುವ ಮೂರು ತಂಡಗಳ ಸ್ಟೂಡೆಂಟ್ ಸ್ಕೂಲ್ ಐಟಿ ಕೋ-ಓರ್ಡಿನೇಟರ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಇಂದು ಭಾಗವಹಿಸಿ ಮಾತನಾಡುತ್ತಿದ್ದರು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಜಯದೇವ ಖಂಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯ ಯು.ರವಿಕೃಷ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೀರ್ಚಾಲು ಘಟಕ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ಸಂಪನ್ಮೂಲ ವ್ಯಕ್ತಿ ಕಾನ ರವಿಶಂಕರ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಮುಕ್ತೇಶ.ಬಿ ಸ್ವಾಗತಿಸಿ ಉಮೈಮತ್ ವಂದಿಸಿದರು. ಗಿರಿಶಂಕರ.ಕೆ ಕಾರ್ಯಕ್ರಮ ನಿರೂಪಿಸಿದರು. ಸ್ವಾತಿ ಮಯ್ಯ ಹಾಗೂ ಶ್ರೀರಶ್ಮಿ. ಸಿ.ಎಸ್ ಪ್ರಾರ್ಥನೆ ಹಾಡಿದರು. ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ಒಟ್ಟು ೯೦ ಕೇಂದ್ರಗಳಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಒಟ್ಟು ೫೦೩೨ ಮಂದಿ ವಿದ್ಯಾರ್ಥಿಗಳು ಈ ವಿಶೇಷ ತರಬೇತಿಯನ್ನು ಪಡೆದಿದ್ದಾರೆ.












