Flash

Flash: ನಮ್ಮ ಶಾಲೆಗೆ 100% ಫಲಿತಾಂಶ, 29 ಮಂದಿಗೆ ಎಲ್ಲ ವಿಷಯಗಳಲ್ಲಿ ಎ+

17 March 2009

ಹರೀಶನಿಗೆ ಪಾಸಾಗಬೇಕು: ನಾಳೆಗಾಗಿ, ನಾಡಿಗಾಗಿ


ಪ್ರಸಕ್ತ ಎಸ್. ಎಸ್. ಎಲ್. ಸಿ ಪರೀಕ್ಷೆ ಬರೆಯುತ್ತಿರುವ, ಓದಿನಲ್ಲಿ ಅತ್ಯಂತ ಹಿಂದುಳಿದ ಆದಿವಾಸಿ ಕೊರಗ ಜನಾಂಗದ ಪ್ರಪ್ರಥಮ ಹುಡುಗ ಹರೀಶನ ಚಿತ್ರವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಆತ ನಮ್ಮ ಶಾಲೆಯ ಹತ್ತು ‘ಡಿ’ ತರಗತಿಯ ವಿದ್ಯಾರ್ಥಿ. ತನ್ನ ಸಮುದಾಯಕ್ಕೆ ಆದರ್ಶವಾಗಿ ಎಸ್. ಎಸ್. ಎಲ್. ಸಿ ಪಾಸಾಗಬಲ್ಲ ವಿದ್ಯಾರ್ಥಿ. ನಮ್ಮ ವತಿಯಿಂದ ಆತನಿಗೆ ಅನಂತ ಶುಭಕಾಮನೆಗಳು. ಈ ಹಿಂದೆಯೇ ಮಲಯಾಳ ಮನೋರಮಾ ಪತ್ರಿಕೆ ನಮ್ಮ ಕುರಿತು ಬರೆದಿರುವುದನ್ನು ಹೇಳಿಕೊಂಡಿದ್ದೇವೆ. ಈ ಬಾರಿ ನಿಮ್ಮ ಮುಂದೆ ಮಲಯಾಳ ಮಾಧ್ಯಮಗಳ ‘ನ್ಯೂಸ್ ನೋಸ್’ ಎಷ್ಟು ಜಾಗರೂಕವಾಗಿರುತ್ತದೆ ಎಂಬುದನ್ನು ತೋರಿಸುವ ಉದ್ದೇಶದಿಂದ ಮತ್ತೆ ಮಲಯಾಳ ಮನೋರಮಾ ಪತ್ರಿಕೆಯನ್ನು ನಿಮ್ಮ ಮುಂದೆ ಹರವಿದ್ದೇವೆ. ಎಲ್ಲೋ ಸಿಕ್ಕಿದ ಚೂರು ಸುದ್ದಿಯೊಂದನ್ನು ಆಧಾರವಾಗಿರಿಸಿ ಹೊಸ ಸುದ್ದಿಯೊಂದನ್ನು ಹೊರತೆಗೆದಿದ್ದಾರೆ. ದೌರ್ಭಾಘ್ಯವೆಂದರೆ ನಮ್ಮ ಯಾವ ಕನ್ನಡ ಪತ್ರಿಕೆಗಳಿಗೂ ಹರೀಶನ ಸಾಧನೆ ಅತ್ಯಂತ ಅಪೂರ್ವವಾದದ್ದು ಎಂದು ಅರಿವಾಗಿರಲಿಲ್ಲ ಅನಿಸುತ್ತಿದೆ. ಮಲಯಾಳ ಮಾಧ್ಯಮಗಳಿಂದ ನಾವು ಕಲಿಯಬೇಕಾದ್ದು ಬೇಕಾದಷ್ಟಿದೆ ಎಂದು ಸ್ನೇಹಿತ ಮಹೇಶ ಪುಚ್ಚಪ್ಪಾಡಿ ಹೇಳಿದ್ದು ಸುಳ್ಳಲ್ಲ.

2 comments:

  1. ರವಿಶಂಕರ್‍ ಅವರೇ,

    ನಿಮ್ಮ ಶಾಲೆಯ ಬ್ಲಾಗ್ ಚೆನ್ನಾಗಿದೆ...ನಿಮ್ಮ ಶಾಲೆಯಲ್ಲಿ ಕಲಿಯುತ್ತಿರುವ ಕೊರಗ ಸಮುದಾಯದ ವಿದ್ಯಾರ್ಥಿ ಹರೀಶನ ವಿಷಯ ತಿಳಿದು ಖುಷಿಯಾಯ್ತು..ಆದರೆ ಮಲಯಾಳಂ ಪತ್ರಿಕೆಗಳನ್ನು ಹೊಗಳುವ ಭರದಲ್ಲಿ ಕನ್ನಡದ ಪತ್ರಿಕೆಗಳನ್ನು ಸಾಮಾನ್ಯೀಕರಿಸಿದರೆ ಹೇಗಾದೀತು? :)
    ಮಂಗಳೂರಿನಲ್ಲಿ ಎರಡು ವರ್ಷ ಮೊದಲು ಕೊರಗ ಜನಾಂಗದ ರವೀಂದ್ರ ಎಂಬ ಯುವಕ ಬಿಎಡ್ ಪಾಸ್ ಆಗಿ ಈಗ ಮೇಸ್ಟ್ರಾದ ಸುದ್ದಿ ನಾನು ಕೆಲಸ ಮಾಡುವ ಕನ್ನಡಪ್ರಭ ಪತ್ರಿಕೆಯಲ್ಲಿ ಬಂದಿತ್ತು...ಎಲ್ಲವನ್ನೂ ಎಲ್ಲ ಪತ್ರಿಕೆಗಳು ಪ್ರಕಟಿಸುವುದು ಬಹುಷಃ ಅಸಾಧ್ಯವೇನೋ..ಮಲಯಾಳಂ ಪತ್ರಿಕೆಗಳಿರಲಿ, ಇಂಗ್ಲಿಷ್ ಇರಲಿ ಒಳ್ಳೆಯ ಅಂಶಗಳನ್ನು ಅನುಕರಿಸೋಣ, ಆದಷ್ಟೂ ಅಭಿವೃದ್ದಿ ಕುರಿತ ವಿಷಯ ಪ್ರಕಟಿಸಲು ನಾವೆಲ್ಲ ಪ್ರಯತ್ನಿಸೋಣ...ನಿಮ್ಮ ಬೆಂಬಲವೂ ನಮಗೆ ಇರಲಿ.
    ವಂದನೆಗಳು.
    -ವೇಣು

    ReplyDelete
  2. ನಮಸ್ಕಾರ,
    ನಿಮ್ಮ ಅಭಿಪ್ರಾಯವನ್ನು ಸ್ವೀಕರಿಸಿದ್ದೇವೆ. ಕನ್ನಡದ ಪತ್ರಿಕೆಗಳನ್ನು ಸಾಮಾನ್ಯೀಕರಿಸುವುದು ನಮ್ಮ ಅಭಿಪ್ರಾಯವಾಗಿರಲಿಲ್ಲ. ಕೇರಳದಲ್ಲಿರುವ ಅಚ್ಚ ಕನ್ನಡ ಮಾಧ್ಯಮದ ಶಾಲೆಯಲ್ಲಿ ಕಲಿಯುತ್ತಿರುವ ಪ್ರಪ್ರಥಮ ಕೊರಗ ಹುಡುಗನ ಬಗ್ಗೆ ಮಲಯಾಳದ ಪತ್ರಿಕೆ ಬರೆದಿರುವುದರಿಂದ ಇಲ್ಲಿ ಉಲ್ಲೇಖಿಸಿದ್ದು ಅಷ್ಟೇ. ನಿಮಗೆ ನೋವಾಗಿದ್ದರೆ ಕ್ಷಮಿಸಿ.
    ಅಂದ ಹಾಗೆ ಕರ್ನಾಟಕದ ಹೆಸರಾಂತ ಪತ್ರಿಕೆ ಕನ್ನಡ ಪ್ರಭದ ಒಂದೇ ಒಂದು ಪ್ರತಿಯೂ ನಮ್ಮ ಗಡಿನಾಡು ಕಾಸರಗೋಡಿನಲ್ಲಿ ದೊರಕುತ್ತಿಲ್ಲ. ಆದ್ದರಿಂದ ಮಂಗಳೂರಿನ ಕೊರಗ ಹುಡುಗ ಮೇಷ್ಟ್ರಾದ ಸುದ್ದಿ ನಮ್ಮನ್ನು ತಲಪಲಿಲ್ಲ ಅಂತ ಅನಿಸುತ್ತಿದೆ.

    ReplyDelete